ಬೆಂಗಳೂರು : ಕೊರೊನಾ ವೈರಸ್ ಸೋಂಕು ಹರಡುತ್ತಿರೋ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎಪ್ರಿಲ್ 30ರ ವರೆಗೆ ಲಾಕ್ ಡೌನ್ ಮುಂದುವರಿಸುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸಿ ಲಾಕ್ ಡೌನ್ ಕುರಿತು ಆದೇಶ ಹೊರಡಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಬೆಂಗಳೂರಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವರು, ವಿಪಕ್ಷಗಳ ಮುಖಂಡರು ಹಾಗೂ ತಜ್ಞರು ಇನ್ನೂ 15 ದಿನಗಳ ಕಾಲ ಲಾಕ್ ಡೌನ್ ಮುಂದುವರಿಸುವಂತೆ ಸಲಹೆ ನೀಡುತ್ತಿದ್ದಾರೆ. ಅಲ್ಲದೇ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಸಚಿವ ಸಂಪುಟ ಸಭೆಯಲ್ಲಿ ಲಾಕ್ ಡೌನ್ ವಿಸ್ತರಣೆ ಮಾಡುವ ಕುರಿತು ಒಪ್ಪಿಗೆಯನ್ನು ಸೂಚಿಸಿದ್ದಾರೆ.

ಎಪ್ರಿಲ್ 11ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಗಳ ಸಭೆಯನ್ನು ಕರೆದಿದ್ದಾರೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸಿದ ನಂತರದಲ್ಲಿ ಲಾಕ್ ಡೌನ್ ಕುರಿತು ತೀರ್ಮಾನ ಕೈಗೊಳ್ಳುವುದಾಗಿ ಮುಂದಿನ ದಿನಗಳಲ್ಲಿ ಲಾಕ್ ಡೌನ್ ಆದೇಶವನ್ನು ಇನ್ನಷ್ಟು ಬಿಗಿಗೊಳಿಸುವುದಾಗಿ ಅವರು ಹೇಳಿದ್ದಾರೆ.