ಮಡಿಕೇರಿ : ಭಾರೀ ಮಳೆಯ ಹಿನ್ನೆಲೆಯಲ್ಲಿ ಕಾವೇರಿ ತೀಥ೯ಕ್ಷೇತ್ರ ತಲಕಾವೇರಿಯಲ್ಲಿ ನಡೆದಿರುವ ಭೂ ಕುಸಿತದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಅರ್ಚಕರು ಸೇರಿದಂತೆ 5 ಮಂದಿ ನಾಪತ್ತೆಯಾಗಿದ್ದು. ಸಾವು ನೋವುಗಳ ಪ್ರಮಾಣ ಹೆಚ್ಚುತ್ತಿದೆ. ಇದೀಗ ಎನ್ ಡಿಆರ್ ಎಫ್ ತಂಡ ಕಾರ್ಯಾಚರಣೆಯನ್ನು ಆರಂಭಿಸಿದೆ.

ಭಾರೀ ಪ್ರಮಾನದ ಭೂಕುಸಿತದಿಂದಾಗಿ ಎರಡು ಮನೆಗಳು ಮಣ್ಣುಪಾಲಾಗಿದ್ದು, ತಲಕಾವೇರಿ ಕ್ಷೇತ್ರದ ಪ್ರಧಾನ ಅಚ೯ಕ ಟಿ.ಎಸ್.ನಾರಾಯಣ ಆಚಾರ್ ಮತ್ತು ಅವರ ಪತ್ನಿ, ಆನಂದತೀಥ೯ ಮತ್ತು ಇಬ್ಬರು ಅಚ೯ಕರು ಸೇರಿ ನಾಲ್ವರು ನಾಪತ್ತೆಯಾಗಿದ್ದಾರೆ. 20ಕ್ಕೂ ಹೆಚ್ಚು ಹಸುಗಳು ಮೃತಪಟ್ಟಿವೆ. ಎರಡು ಕಾರು ಸಂಪೂರ್ಣ ಜಖಂ ಆಗಿದೆ.

ಅಚ೯ಕರ ಕುಟುಂಬದ ಪತ್ತೆಗಾಗಿ ಸ್ಥಳೀಯರು ಹರಸಾಹಸ ಪಡುತ್ತಿದ್ದು, ಪ್ರಾಣಾಪಾಯ ಸಂಭವಿಸದಿರಲಿ ಎಂದು ಪ್ರಾರ್ಥಿಸಿದ್ದಾರೆ. ಅರ್ಚಕರ ಕುಟುಂಬ ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು. ಅವರ ಪತ್ತೆಗಾಗಿ ಕಾಯಾ೯ಚರಣೆ ಮುಂದುವರಿದಿದೆ.

.ಸುಮಾರು 6 ಕಿ.ಮೀ. ಉದ್ದಕ್ಕೆ ಬೆಟ್ಟಸಾಲು ಕುಸಿದು ಸಂಭವಿಸಿದ ಈ ದುರಂತದಲ್ಲಿ ಎರಡು ಕಾರು, 20 ಕ್ಕೂ ಹೆಚ್ಚು ಹಸುಗಳು ಕಾಣೆಯಾಗಿವೆ. ಭಾರೀ ಮಂಜು ಮತ್ತು ಮಳೆಯಿಂದಾಗಿ ರಕ್ಷಣಾ ಕಾಯಾ೯ಚರಣೆಗೆ ತೊಡಕಾಗಿದೆ. ಭಾಗಮಂಡಲ – ತಲಕಾವೇರಿ ರಸ್ತೆಯಲ್ಲಿ ಅಲ್ಲಲ್ಲಿ ಭೂಕುಸಿತ ಉಂಟಾಗಿರುವುದರಿಂದ ರಕ್ಷಣಾ ಕಾಯ೯ಪಡೆಯ ವಾಹನಗಳೂ ವೇಗವಾಗಿ ಸ್ಥಳಕ್ಕೆ ತೆರಳಲು ಅಡ್ಡಿಯಾಗಿವೆ. ಸ್ಥಳದಲ್ಲಿ ಕೊಡಗು ಜಿಲ್ಲಾಧಿಕಾರಿ ಜಾಯ್ ಕಣ್ಮಣಿ ಮೊಕ್ಕಾಂ ಹೂಡಿದ್ದು, ಕಾರ್ಯಚರಣೆಗೆ ಮಾರ್ಗದರ್ಶನವನ್ನು ನೀಡುತ್ತಿದ್ದಾರೆ. ಉಸ್ತುವಾರಿ ಸಚಿವ ವಿ.ಸೋಮಣ್ಣ ಕೂಡ ಮಡಿಕೇರಿಗೆ ಆಗಮಿಸುತ್ತಿದ್ದಾರೆ.

ಇನ್ನೊಂದೆಡೆ ಕೊಡಗು ಜಿಲ್ಲೆಯಾದ್ಯಂತ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಭಾಗಮಂಡಲದ ಭಗಂಡಕ್ಷೇತ್ರ ದ್ವೀಪದಂತಾಗಿದ್ದು, ಭಗಂಡೇಶ್ವರ ದೇವಾಲಯದ ಮೆಟ್ಟಿಲವರೆಗೂ ಪ್ರವಾಹದ ನೀರು ತುಂಬಿದೆ. ಮಳೆಯಿಂದಾಗಿ ಜಿಲ್ಲೆಯಾದ್ಯಂತ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ.

ವೀರಾಜಪೇಟೆಗೆ ತೆರಳುವ ರಸ್ತೆಯ ಬೇತ್ರಿ ಸೇತುವೆ ಕಾವೇರಿ ನದಿ ನೀರಿನಿಂದತುಂಬಿಕೊಂಡಿದ್ದು ಸೇತುವೆ ಮೇಲೇ ನೀರು ಹರಿಯುತ್ತಿದೆ. ಇದರಿಂದಾಗಿ ಈ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಇದುವರೆಗೆ ಒಟ್ಟು 700 ಮಂದಿಯನ್ನು ರಕ್ಷಿಸಿ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.