ಮಂಗಳೂರು : ಕೊರೊನಾ ಮಹಾಮಾರಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾವಿನ ಸರಣಿ ಮುಂದುವರಿದಿದೆ. ಇಂದು ಒಂದೇ ಬಾಣಂತಿ ಸಹಿತ ಮೂವರು ಕೊರೊನಾ ಮಹಾಮಾರಿಗೆ ಬಲಿಯಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ.

ಪುತ್ತೂರು ಮೂಲ ಬಾಣಂತಿಯೋರ್ವರು ಹೆರಿಗೆಗೆಂದು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆಯಲ್ಲಿ ಮಹಿಳೆಯ ಗಂಟಲು ದ್ರವದ ಮಾದರಿ ಪರೀಕ್ಷೆ ನಡೆಸಿದಾಗ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಮಹಿಳೆಗೆ ಹೆರಿಗೆಯಾದ ನಂತರದಲ್ಲಿ ಮಹಿಳೆ ಹಾಗೂ ಮಗುವನ್ನು ಮಂಗಳೂರಿನ ಕೋವಿಡ್ ಆಸ್ಪತ್ರೆಗೆ ದಾಖಲಾಗಿತ್ತು. ಆದರೆ ಬಾಣಂತಿಯ ಆರೋಗ್ಯದಲ್ಲಿ ವ್ಯತ್ಯಯವಾಗಿದ್ದು, ಇಂದು ಸಾವನ್ನಪ್ಪಿದ್ದಾರೆ.

ಇನ್ನು ಉಳ್ಳಾಲ ಮೂಲದ 62 ವಯಸ್ಸಿನ ವೃದ್ಧೆ ಹಾಗೂ ಭಟ್ಕಳ ಮೂಲದ 60 ವರ್ಷದ ವ್ಯಕ್ತಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇಂದು ಸಾವನ್ನಪ್ಪಿರುವವರ ಪೈಕಿ ಇಬ್ಬರು ಸರಕಾರಿ ಕೋವಿಡ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ರೆ, ಓರ್ವರು ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಕರಾವಳಿಯಲ್ಲಿ ಕೊರೊನಾ ಸೋಂಕು ಒಂದೆಡೆ ಹೆಚ್ಚುತ್ತಿದ್ದು, ಇನ್ನೊಂದೆಡೆ ಸಾವನ್ನಪ್ಪುವವರ ಸಂಖ್ಯೆಯಲ್ಲಿಯೂ ಏರಿಕೆಯನ್ನು ಕಾಣುತ್ತಿದೆ. ಇದು ಕರಾವಳಿಗರ ಆತಂಕಕ್ಕೆ ಕಾರಣವಾಗಿದೆ.