ಮುಂಬೈ : ಕೊರೊನಾ ಮಹಾಮಾರಿ ಮಹಾರಾಷ್ಟ್ರದಲ್ಲಿ ಆರ್ಭಟಿಸುತ್ತಿದೆ. ದಿನೇ ದಿನೇ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಆದ್ರೀಗ ಉದ್ಯೋಗಕ್ಕಾಗಿ ಮುಂಬೈಗೆ ತೆರಳಿದ್ದ ಕನ್ನಡಿಗರು ಕಣ್ಣೀರಲ್ಲೇ ದಿನದೂಡುತ್ತಿದ್ದಾರೆ.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಜನತೆ ಉದ್ಯೋಗಕ್ಕಾಗಿ ದೂರದ ಮುಂಬೈನಲ್ಲಿ ನೆಲೆಸಿದ್ದಾರೆ. ಹೋಟೆಲ್, ಕಂಪೆನಿಗಳಲ್ಲಿ ಉದ್ಯೋಗವನ್ನು ಮಾಡುತ್ತಾ, ಅಲ್ಲಿಯೇ ಬದುಕನ್ನು ಕಟ್ಟಿಕೊಂಡಿದ್ದಾರೆ. ಆದ್ರೀಗ ಡೆಡ್ಲಿ ಕೊರೊನಾ ಮಹಾಮಾರಿ ಹೊರನಾಡ ಕನ್ನಡಿಗರ ಬದುಕನ್ನೇ ಚಿಂದಿ ಮಾಡಿದೆ. ಕೋವಿಡ್ -19 ಸೋಂಕು ದೇಶದಾದ್ಯಂತ ವ್ಯಾಪಕವಾಗಿ ಹರಡುತ್ತಲೇ ಕೇಂದ್ರ ಸರಕಾರ ಲಾಕ್ ಡೌನ್ ಆದೇಶ ಜಾರಿ ಮಾಡಿದೆ.

ಅದ್ರಲ್ಲೂ ಮಹಾರಾಷ್ಟ್ರದಲ್ಲಿ ಕೊರೊನಾ ಪೀಡಿತರ ಸಂಖ್ಯೆ ದೇಶದಲ್ಲಿಯೇ ಹೆಚ್ಚಿದೆ. ಅದ್ರಲ್ಲೂ ಮುಂಬೈ ಮಹಾನಗರದಲ್ಲಿ ಕೊರೊನಾ ತೀವ್ರತೆ ಹೆಚ್ಚುತ್ತಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾದ್ರು, ಸರಿಯಾದ ರೀತಿಯಲ್ಲಿ ಚಿಕಿತ್ಸೆ ಲಭಿಸುತ್ತಿಲ್ಲ. ಹೊಟ್ಟೆಪಾಡಿಗಾಗಿ ಮುಂಬೈನಲ್ಲಿ ಜೀವನ ನಡೆಸುತ್ತಿರೋ ಕನ್ನಡಿಗರು ಹೊತ್ತಿನ ತುತ್ತಿಗೂ ಪರದಾಡುವ ಸ್ಥಿತಿ ಎದುರಾಗಿದೆ.

ಒಂದೆಡೆ ಮಾಡೋದಕ್ಕೆ ಕೆಲಸವೂ ಇಲ್ಲಾ, ಕೈಯಲ್ಲಿ ಹಣವೂ ಇಲ್ಲ, ಅದ್ರಲ್ಲೂ ಹೋಟೆಲ್ ಗಳಲ್ಲಿ ಕೆಲಸ ಮಾಡುತ್ತಿರೋ ಕರ್ನಾಟಕ ಕಾರ್ಮಿಕರು ಚಾಲಿಗಳಲ್ಲಿ ಬದುಕುತ್ತಿದ್ದಾರೆ. ಮೂಲಭೂತ ಸೌಲಭ್ಯಗಳೇ ಇಲ್ಲದೇ, ಸಾರ್ವಜನಿಕ ಶೌಚಾಲಯವನ್ನೇ ಬಳಸಬೇಕಾದ ಅನಿವಾರ್ಯತೆಯಿದೆ. ಹೀಗಾಗಿ ಕೊರೊನಾ ಹರಡೋ ಆತಂಕ ಇವರನ್ನು ಕಾಡುತ್ತಿದೆ.

ಅದ್ರಲ್ಲೂ ಮಹಾರಾಷ್ಟ್ರದಲ್ಲಿ ಕೊರೊನಾ ಪೀಡಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರೋದು ಹೊರನಾಡಿನ ಕನ್ನಡಿಗರಲ್ಲಿ ಆತಂಕ್ಕೆ ಮೂಡಿಸುತ್ತಿದೆ. ಈಗಾಗಲೇ ಹಲವಾರು ಮಂದಿ ಮುಂಬೈ ಕನ್ನಡಿಗರು ಸಾಮಾಜಿಕ ಜಾಲತಾಣಗಳಲ್ಲಿ ನಮಗೆ ಕರ್ನಾಟಕಕ್ಕೆ ಬರಲು ಅವಕಾಶವನ್ನು ಕಲ್ಪಿಸಿ ಅಂತಾ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಮುಂಬೈನಲ್ಲಿ ಕೊರೊನಾ ಸೋಂಕು ವ್ಯಾಪಿಸುತ್ತಿರೋ ಹಿನ್ನೆಲೆಯಲ್ಲಿ ಮುಂಬೈನಲ್ಲಿ ನೆಲೆಸಿರುವವರ ಹೆತ್ತವರು ಕೂಡ ಆತಂಕದಲ್ಲಿಯೇ ದಿನದೂಡುತ್ತಿದ್ದಾರೆ. ಹಲವರು ಲಾಕ್ ಡೌನ್ ಆದೇಶ ಘೋಷಣೆಯಾಗುತ್ತಲೇ ತಮ್ಮೂರಿಗೆ ತೆರಳಿದ್ದಾರೆ. ಆದರೆ ಹಲವರಿಗೆ ಬರೋದಕ್ಕೆ ಸಾಧ್ಯವಾಗಿಲ್ಲ.

ಇನ್ನೂ ಕೆಲವರು ಖಾಸಗಿ ವಾಹನಗಳ ಮೂಲಕ ಕರ್ನಾಟಕಕ್ಕೆ ಬರಲು ಯತ್ನಿಸಿದ್ರೂ ರಾಜ್ಯದ ಗಡಿಗಳನ್ನು ಬಂದ್ ಮಾಡಿದ್ದರಿಂದಾಗಿ ಸಾಧ್ಯವಾಗಿರಲಿಲ್ಲ. ಅದ್ರಲ್ಲೂ ಹೋಟೆಲ್, ಕಾರ್ಖಾನೆ, ಕಂಪೆನಿಗಳಲ್ಲಿ ಕೆಲಸ ಮಾಡುವ ಕನ್ನಡಿಗರು ಸಡನ್ ಆಗಿ ಲಾಕ್ ಡೌನ್ ಘೋಷಣೆ ಮಾಡಿರೋದ್ರಿಂದಾಗಿ ತಮ್ಮೂರುಗಳಿಗೆ ತೆರಳೋದಕ್ಕೆ ಸಾಧ್ಯವಾಗಿಲ್ಲ.

ಮುಂಬೈನಲ್ಲಿ ನೆಲೆಸಿರುವ ಕನ್ನಡಿಗರು ಒಂದೆಡೆ ಕೊರೊನಾ ಭಯ, ಇನ್ನೊಂದೆಡೆ ಊಟಕ್ಕೂ ಪರದಾಡುವ ಸ್ಥಿತಿ ಎದುರಾಗಿದೆ. ಲಾಕ್ ಡೌನ್ ಮುಂದುವರಿಕೆಯಾದ್ರೆ ನಾವು ನಡೆದುಕೊಂಡಾದ್ರೂ ಊರಿಗೆ ಬರ್ತೇವೆ. ನಮ್ಮ ಮೇಲೆ ಕಾನೂನು ಕ್ರಮಕೈಗೊಂಡರೂ ಪರವಾಗಿಲ್ಲಾ, ಹೀಗಾಗಿ ನಮಗೆ ಕರ್ನಾಟಕಕ್ಕೆ ಬರಲು ಅವಕಾಶ ಕಲ್ಪಿಸಿ. ತಮ್ಮೂರಿಗೆ ಮರಳಿದ ಮೇಲೆ ಹೋಮ್ ಕ್ವಾರಂಟೈನ್ ನಲ್ಲಿ ಇರೋದಕ್ಕೂ ನಾವು ರೆಡಿ ಇದ್ದೇವೆ.

ಆದರೆ ಒಂದು ಬಾರಿ ಅವಕಾಶವನ್ನು ಕಲ್ಪಿಸಿ ಅಂತಾ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ. ಹೀಗಾಗಿ ರಾಜ್ಯ ಸರಕಾರ ಹೊರ ರಾಜ್ಯಗಳಲ್ಲಿ ನೆಲೆಸಿರುವ ಕನ್ನಡಿಗರ ನೆರವಿಗೆ ಧಾವಿಸಲೇ ಬೇಕಾದ ಅಗತ್ಯವಿದೆ. ರಾಜ್ಯದ ಗಡಿ ಭಾಗದಲ್ಲಾದ್ರೂ ಹೋಮ್ ಕ್ವಾರಂಟೈನ್ ವ್ಯವಸ್ಥೆಯನ್ನು ಕಲ್ಪಿಸೋ ಮೂಲಕ ಮುಂಬೈ ಕನ್ನಡಿಗರಿಗೆ ನ್ಯಾಯ ಒದಗಿಸಬೇಕಾದ ಅಗತ್ಯವಿದೆ.