ಮೈಸೂರು : ಸದಾ ಒಂದಿಲ್ಲೊಂದು ಸಮಾಜಮುಖಿ ಕಾರ್ಯಗಳಿಂದಲೇ ಜನಪ್ರಿಯರಾಗಿರುವ ಇನ್ಫೋಸಿಸ್ ಪ್ರತಿಷ್ಠಾನದ ಸುಧಾಮೂರ್ತಿ ಅವರೀಗ ಮೃಗಾಲಯದಲ್ಲಿರುವ ಪ್ರಾಣಿಗಳಿಗೆ ಆಸರೆಯಾಗಿದ್ದಾರೆ. ಕೊರೊನಾ ವೈರಸ್ ಸೋಂಕಿನಿಂದ ಉಂಟಾಗಿರುವ ಆರ್ಥಿಕ ಸಂಕಷ್ಟ ನಡುವಲ್ಲೇ ಸುಧಾಮೂರ್ತಿ ಅವರು ಮೈಸೂರು ಮೃಗಾಲಯಕ್ಕೆ ಮತ್ತೊಮ್ಮೆ 20 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.

ಬರಗಾಲವಿರಲಿ, ಪ್ರವಾಹವೇ ಇರಲಿ. ಸದಾ ಬಡವರ ಕಣ್ಣೀರಿಗೆ ಕರಗುವ ಸುಧಾಮೂರ್ತಿ ಅವರು ಅದೆಷ್ಟೋ ಮಂದಿಗೆ ನೆರವಾಗಿದ್ದಾರೆ. ಕೊರೊನಾ ಕಾಲದಲ್ಲಿಯೂ ಜನರ ಹಸಿವನ್ನು ನೀಗುವ ಕಾರ್ಯವನ್ನು ಮಾಡಿದ್ದಾರೆ. ಸುಧಾಮೂರ್ತಿ ಅವರು ಪ್ರಾಣಿಗಳ ಮೇಲೆ ಅಪಾರ ವಾದ ಪ್ರೀತಿಯನ್ನು ಹೊಂದಿದ್ದಾರೆ.

ಸುಧಾಮೂರ್ತಿ ಅವರು ಮೈಸೂರು ಜಯಚಾಮರಾಜೇಂದ್ರ ಮೃಗಾಲಯದ ಪ್ರಾಣಿಗಳ ಆರೋಗ್ಯ ಮತ್ತು ಮೃಗಾಲಯ ನಿರ್ವಹಣೆಗೆ ಇನ್ಫೋಸಿಸ್ ಫೌಂಡೇಶನ್ ವತಿಯಿಂದ 20 ಲಕ್ಷ ರೂಪಾಯಿ ದೇಣಿಗೆ ನೀಡಿದರು. ಕಳೆದ ಮೇ ತಿಂಗಳಿನಲ್ಲೂ ಸುಧಾ ಮೂರ್ತಿ ಅವರು ಮೃಗಾಲಯಕ್ಕೆ 20 ಲಕ್ಷ ರೂಪಾಯಿ ದೇಣಿಗೆ ನೀಡಿದ್ದರು.

ಕಳೆದ ಕೆಲವು ತಿಂಗಳುಗಳ ಹಿಂದೆ ಲಾಕ್‌ಡೌನ್ ಕಾರಣದಿಂದಾಗಿ ಪ್ರವಾಸಿಗರು ಬರದೆ ಮೃಗಾಲಯದ ನಿರ್ವಹಣೆಗೆ ಹಣದ ಸಮಸ್ಯೆ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಸಹಾಯ ಮಾಡುವಂತೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಇನ್ಫೋಸಿಸ್ ಸಂಸ್ಥೆಗೆ ಪತ್ರ ಬರೆದಿದ್ದರು. ಈ ಪತ್ರಕ್ಕೆ ಸ್ಪಂದಿಸಿದ್ದ ಇನ್ಫೋಸಿಸ್ ಸಂಸ್ಥೆ, ಕಳೆದ ಬಾರಿಯೂ ಮೃಗಾಲಯಕ್ಕೆ 20 ಲಕ್ಷ ರೂ. ದೇಣಿಗೆ ನೀಡಿತ್ತು.

ಇದೀಗ ಮತ್ತೊಮ್ಮೆ 20 ಲಕ್ಷ ರೂ. ದೇಣಿಗೆ ನೀಡಲಾಗಿದೆ. ಸುಧಾಮೂರ್ತಿ ಅವರು ಮಗಾಲಯಕ್ಕೆ ದೇಣಿಗೆ ನೀಡಿರುವುದು ಇದೀಗ ಪ್ರಾಣಿಪ್ರಿಯರಿಗೆ ಖುಷಿಯನ್ನು ನೀಡಿದ್ದು, ಸುಧಾಮೂರ್ತಿ ಅವರಿಗೆ ಮೃಗಾಲಯದ ನಿರ್ದೇಶಕ ಅಜಿತ್ ಕುಲಕರ್ಣಿ ಕೃತಜ್ಞತೆ ಸಲ್ಲಿಸಿದ್ದಾರೆ.