ನವದೆಹಲಿ : ದಿನ ಕಳೆದಂತೆ ದೇಶದಲ್ಲಿ ಕೊರೊನಾ ಮಹಾಮಾರಿಯ ತೀವ್ರತೆ ಹೆಚ್ಚುತ್ತಿದೆ. ಮುಂದಿನ ದಿನಗಳಲ್ಲಿ ಕೊರೊನಾ ಸೋಂಕಿನ ಆರ್ಭಟ ಇನ್ನಷ್ಟು ಹೆಚ್ಚುವ ಆತಂಕ ಎದುರಾಗಿದೆ. ಈ ನಡುವಲ್ಲೇ ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಸಭೆ ನಡೆಸಲು ಮುಂದಾಗಿದ್ದಾರೆ.

ದೇಶದಲ್ಲಿ ಲಾಕ್ ಡೌನ್ ಆದೇಶ ಜಾರಿ ಮಾಡುವ ಸಂರ್ಭದಲ್ಲಿ ಮೋದಿ ಮುಖ್ಯಮಂತ್ರಿಗಳ ಸಭೆಯನ್ನು ಕರೆದು ಎಲ್ಲಾ ರಾಜ್ಯಗಳ ಅಭಿಪ್ರಾಯವನ್ನು ಕೇಳಿದ್ದರು. ಮಾತ್ರವಲ್ಲ ಅನ್ ಲಾಕ್ ಮಾಡುವ ಸಂದರ್ಭದಲ್ಲಿಯೂ ಸಭೆ ಸೇರಿದ್ದರು. ಇದೀಗ ಮತ್ತೆ ಪ್ರಧಾನಿ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ. ಎರಡು ಬ್ಯಾಚ್ ಗಳಲ್ಲಿ ಮುಖ್ಯಮಂತ್ರಿಗಳ ಸಭೆ ನಡೆಯಲಿದೆ. ಜೂನ್ 16ರಂದು ಸಂಜೆ 3 ಗಂಟೆಗೆ 21 ಮುಖ್ಯಮಂತ್ರಿಗಳು ಹಾಗೂ ಲೆಫ್ಟಿನೆಂಟ್ ಗವರ್ನರ್ ಜೊತೆಗೆ ಸಭೆ ನಡೆಲಿದ್ರೆ, ಜೂನ್ 17ರಂದು ಸಂಜೆ 3 ಗಂಟೆ 15 ಮುಖ್ಯಮಂತ್ರಿಗಳು ಹಾಗೂ ಲೆಫ್ಟಿನೆಂಟ್ ಗವರ್ನರ್ ಜೊತೆಗೆ ಸಭೆ ನಡೆಸಲಿದ್ದಾರೆ.

ದೇಶದಲ್ಲಿ ಕೊರೊನಾ ಮಹಾಮಾರಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಹಾಗೂ ಲೆಫ್ಟಿನೆಂಟ್ ಗವರ್ನರ್ ಜೊತೆಗೆ ಪ್ರಧಾನಿಗಳ ಸಭೆ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ. ಅಲ್ಲದೇ ದೇಶದಲ್ಲಿ ಕೊರೊನಾ ತಡೆಗೆ ಯಾವೆಲ್ಲಾ ಮಾರ್ಗಗಳನ್ನು ಅನುಸರಿಸಬಹುದು. ಜುಲೈಹಾಗೂ ಅಗಸ್ಟ್ ತಿಂಗಳಿನಲ್ಲಿ ಕೊರೊನಾ ತೀವ್ರ ಹೆಚ್ಚುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಅಭಿಪ್ರಾಯವನ್ನು ಪಡೆಯುವ ಸಾಧ್ಯತೆಯಿದೆ. ಇನ್ನೊಂದೆಡೆ ದೇಶದಲ್ಲಿ ಮತ್ತೆ ಲಾಕ್ ಡೌನ್ ಹೇರಿಕೆಯಾಗುತ್ತೆ ಅನ್ನುವ ಮಾತುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಸಭೆ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ.