ಲಂಡನ್ : ಹೆಮ್ಮಾರಿ ಕೊರೊನಾ ವೈರಸ್ ಸೋಂಕಿಗೆ ನಿಯಂತ್ರಣ ಹೇರುವ ನಿಟ್ಟಿನಲ್ಲಿ ವಿಶ್ವದಾದ್ಯಂತ ಸಂಶೋಧನೆಗಳು ನಡೆಯುತ್ತಿವೆ. ಜಗತ್ತಿನ ಪ್ರತಿಷ್ಠಿತ ಫಾರ್ಮಾ ಕಂಪೆನಿಗಳೇ ಲಸಿಕೆಯ ಸಂಶೋಧನೆಯಲ್ಲಿ ತೊಡಗಿಕೊಂಡಿವೆ. ಈ ನಡುವಲ್ಲೇ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಕಂಡುಹಿಡಿದಿರುವ ಕೊರೋನಾವೈರಸ್ ಲಸಿಕೆ ಆರಂಭಿಕ ಪರೀಕ್ಷೆಯಲ್ಲಿ ರೋಗನಿರೋಧಕ ವೃದ್ಧಿಯಾಗಿದೆ.

ಏಪ್ರಿಲ್ ತಿಂಗಳಿನಲ್ಲಿ ಸಾವಿರಾರು ಜನರ ಮೇಲೆ ಕೊರೊನಾ ಲಸಿಕೆಯನ್ನು ಪ್ರಯೋಗ ಮಾಡಲಾಗಿತ್ತು. ಈ ಪೈಕಿ ಅರ್ಧದಷ್ಟು ಮಹಿಳೆಯರಿದ್ದು ಅವರಿಗೂ ಆರಂಭಿಕವಾಗಿ ಲಸಿಕೆ ನೀಡಿಲಾಗಿತ್ತು. ಇದರಿಂದ ಸುರಕ್ಷತೆಯನ್ನು ಮೌಲ್ಯಮಾಪನ ಮಾಡಲು ಮತ್ತು ಯಾವ ರೀತಿಯ ರೋಗನಿರೋಧಕ ಪ್ರಕ್ರಿಯೆ ಆರಂಭಿಸುತ್ತದೆ ಎಂಬುದನ್ನು ನೋಡಲು ವಿನ್ಯಾಸಗೊಳಿಸಲಾಗಿತ್ತು.

ಆದರೆ ಲಸಿಕೆ ನಿಜವಾಗಿಯೂ ಕೊರೊನಾ ವೈರಸ್ ಸೋಂಕಿನಿಂದ ಜನರನ್ನು ರಕ್ಷಿಸುತ್ತದೆಯೇ ಎನ್ನುವ ಕುರಿತು ಸಂಶೋಧನೆಗಳು ನಡೆಯುತ್ತಿವೆ. ಈ ನಡುವಲ್ಲೇ ಆಕ್ಸ್ ಫರ್ಡ್ ವಿವಿ ನೀಡಿರುವ ಲಸಿಕೆ ಜನರಲ್ಲಿ ರಕ್ಷಣಾತ್ಮಕ ರೋಗನಿರೋಧಕವನ್ನು ಹೆಚ್ಚಿಸಿದೆ ಎಂದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ತಿಳಿಸಿದ್ದಾರೆ.

ಲ್ಯಾನ್ಸೆಟ್ ಜರ್ನಲ್ನಲ್ಲಿ ಸೋಮವಾರ ಪ್ರಕಟವಾದ ವರದಿಯಲ್ಲಿ ವಿಜ್ಞಾನಿಗಳು ತಮ್ಮ ಪ್ರಾಯೋಗಿಕ ಕೋವಿಡ್ 19 ಲಸಿಕೆಯನ್ನು 18 ರಿಂದ 55 ವರ್ಷ ವಯಸ್ಸಿನವರ ಮೇಲೆ ಬಳಸಲಾಗಿದ್ದು ಅವರಲ್ಲಿ ಉಭಯ ರೋಗನಿರೋಧಕ ಪ್ರತಿಕ್ರಿಯೆಯನ್ನು ಉಂಟುಮಾಡಿದೆ ಎಂದು ಪತ್ತೆಹಚ್ಚಿದ್ದಾರೆ. ಎರಡು ತಿಂಗಳ ಬಳಿಕ ಅವರಲ್ಲಿ ರೋಗನಿರೋಧಕ ಹೆಚ್ಚಳವಾಗಿದೆ.

ನಾವು ಎಲ್ಲರಲ್ಲೂ ಉತ್ತಮ ರೋಗನಿರೋಧಕ ಶಕ್ತಿ ವೃದ್ಧಿಯಾಗಿರುವುದನ್ನು ನೋಡಿದ್ದೇವೆ ಎಂದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಜೆನ್ನರ್ ಸಂಸ್ಥೆಯ ನಿರ್ದೇಶಕ ಡಾ. ಆಡ್ರಿಯನ್ ಹಿಲ್ ಹೇಳಿದ್ದು ಈ ಲಸಿಕೆ ವಿಶೇಷವಾಗಿ ರೋಗನಿರೋಧಕ ವ್ಯವಸ್ಥೆಯ ಎರಡೂ ಆಯಾಮಗಳನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದ್ದಾರೆ.