ಕೋಲಾರ : ನಾನು ರಾಜಕೀಯದಿಂದ ನಿವೃತ್ತನಾಗುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ನಾನು ಈ ಕುರಿತು ಅಧಿಕೃತ ಮಾಹಿತಿಯನ್ನೂ ನೀಡಿಲ್ಲ. ನನ್ನ ಬಗ್ಗೆ ಯಾರೂ ಕೂಡ ಅಪಪ್ರಚಾರ ಮಾಡಬೇಡಿ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋಲಾರದ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಗ್ರಾಮ ಪಂಚಾಯತ್ ಚುನಾವಣಾ ಕಾರ್ಯದಲ್ಲಿ ತೊಡಗಿರುವ ರಮೇಶ್ ಕುಮಾರ್ ಮಾಧ್ಯಮದವರೊಂದಿಗೆ ಮಾತನಾಡಿದರು. ನಾನು ಇತ್ತೀಚೆಗೆ ರಾಜಕೀಯ ನಿವೃತ್ತಿ ಘೋಷಿಸಿದ್ದೇನೆಂಬ ವದಂತಿ ಹರಡಿದೆ, ಸಾಮಾಜಿಕ ಜಾಲತಾಣಗಳಲ್ಲಿಯೂ ಇದನ್ನು ಗಮನಿಸಿದ್ದೇನೆ.
ನಾನು ಯಾರಿಗೂ ನಿವೃತ್ತಿಯ ಬಗ್ಗೆ ಹೇಳಿಲ್ಲ. ಯಾವುದೇ ಸುದ್ದಿಗೋಷ್ಠೀಯನ್ನು ಕರೆದಿಲ್ಲ, ಜನರ ಬಳಿಯಲ್ಲಿಯೂ ಹೇಳಿಲ್ಲ, ಇನ್ನು ಬಹಿರಂಗ ಹೇಳಿಕೆಯನ್ನೂ ಕೊಟ್ಟಿಲ್ಲ. ನನ್ನ ಬಗ್ಗೆ ಅಪಪ್ರಚಾರ ನಡೆಯುತ್ತಿದೆ. ದಯಮಾಡಿ ಅಪಪ್ರಚಾರ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
ನಾನು ಗ್ರಾಮ ಪಂಚಾಯತ್ ಚುನಾವಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದೇನೆ. ರಾಜಕೀಯ ನಿವೃತ್ತಿ ಸುದ್ದಿ ಹರಿದಾಡುತ್ತಿದ್ದಂತೆಯೇ ನೂರಾರು ಸಂಖ್ಯೆಯಲ್ಲಿ ಕರೆಗಳು ಬರುತ್ತಿವೆ. ಎಲ್ಲರಿಗೂ ಉತ್ತರ ನೀಡುವ ಕಾರ್ಯವನ್ನು ಮಾಡಿದ್ದೇನೆ. ರಾಜಕೀಯ ನಿವೃತ್ತಿ ನನ್ನೊಬ್ಬನ ನಿರ್ಧಾರವಲ್ಲ. ಮುಖಂಡರು, ಸಾರ್ವಜನಿಕರ ಅಭಿಪ್ರಾಯ ಕೂಡ ಮುಖ್ಯವಾಗುತ್ತದೆ.
ರಾಜಕೀಯದಿಂದ ನಿವೃತ್ತಿಯಾಗುವಷ್ಟು ಸಮಯ ನನ್ನ ಬಳಿಯಂತು ಇಲ್ಲ. ನಾನು ಜನರ ಬಂಧನದಲ್ಲಿ ಸಿಲುಕಿದ್ದೇನೆ. ದಯಮಾಡಿ ಸುಳ್ಳು ಸುದ್ದಿ ಹಬ್ಬಿಸಿ ನನ್ನ ಮಾನಹರಣ ಮಾಡಬೇಡಿ ಎಂದು ವದಂತಿಗಳ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.