ಬೆಂಗಳೂರು : ಸ್ಯಾಂಡಲ್‌ವುಡ್ ನ ಖ್ಯಾತ ನಟ ಪುನಿತ್ ರಾಜ್ ಕುಮಾರ್ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಅವರು ವಿಧಿವಶರಾಗಿ ದ್ದಾರೆ. ಇಂದು ಬೆಳಗ್ಗೆ ಜಿಮ್ ಮಾಡುತ್ತಿರುವ ವೇಳೆಯಲ್ಲಿ ಪುನಿತ್ ರಾಜ್ ಕುಮಾರ್ ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ದಾಖಲಾಗಿದ್ದರೂ ಕೂಡ ಚಿಕಿತ್ಸೆ ಫಲಕಾರಿಯಾಗಿರಲಿಲ್ಲ.
ಕನ್ನಡ ಚಿತ್ರರಂಗಕ್ಕೆ ಬಾಲ ನಟರಾಗಿ ಎಂಟ್ರಿಕೊಟ್ಟಿದ್ದ ಪುನಿತ್ ರಾಜ್ ಕುಮಾರ್ ಅವರು ಕನ್ನಡ ಮೇರು ನಟ ಡಾ.ರಾಜ್ ಕುಮಾರ್ ಅವರ ಮೂರನೇ ಪುತ್ರ. ಬಾಲನಟನಾಗಿ, ಚಿತ್ರನಟನಾಗಿ ಪ್ರಖ್ಯಾತಿಯನ್ನು ಪಡೆದುಕೊಂಡಿದ್ದರು. ಹಿನ್ನೆಲೆ ಗಾಯಕರಾಗಿ, ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ನಾಯಕನಾಗಿ ಹಲವರು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.
1975, ಮಾರ್ಚ್ 17 ರಂದು ಚೆನ್ನೈನ ಕಲ್ಯಾಣಿ ಆಸ್ಪತ್ರೆಯಲ್ಲಿ ವರನಟ ಡಾ.ರಾಜಕುಮಾರ್ ಮತ್ತು ಪಾರ್ವತಮ್ಮರವರ ಕಿರಿಯ ಪುತ್ರನಾಗಿ ಜನಿಸಿದ ಪುನಿತ್ ರಾಜ್ ಕುಮಾರ್ ಅವರು, ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ಕುಮಾರ್ ಅವರ ಸಹೋದರ. ಡಾ.ರಾಜ್ ಕುಮಾರ್ ಅವರ ಪ್ರೀತಿಯ ಪುತ್ರನಾಗಿದ್ದ ಪುನಿತ್ ರಾಜ್ ಕುಮಾರ್ ತಂದೆಯ ಜೊತೆಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು.
ಪ್ರೇಮದ ಕಾಣಿಕೆ ಸಿನಿಮಾದ ಮೂಲಕ ಬೆಳ್ಳಿ ತೆರೆಗೆ ಎಂಟ್ರಿಕೊಟ್ಟ ಪುನಿತ್ ರಾಜ್ ಕುಮಾರ್ ಅವರು ಸನಾದಿ ಅಪ್ಪಣ್ಣ, ತಾಯಿಗೆ ತಕ್ಕ ಮಗ, ವಸಂತ ಗೀತ, ಭೂಮಿಗೆ ಬಂದ ಭಗವಂತ, ರಾಜ ಕುಮಾರ, ಅಪ್ಪು, ನಟಸಾರ್ವಭೌಮ, ಚಕ್ರವ್ಯೂಹ, ಅಂಜನಿ ಪುತ್ರ, ದೊಡ್ಮನೆ ಹುಡುಗ, ಅಭಿ, ಬಿಂದಾಸ್ ಸೇರಿದಂತೆ ಸಾಕಷ್ಟು ಸಿನಿಮಾಗಳನ್ನು ನೀಡಿದ್ದಾರೆ.
ವಿಕ್ರಂ ಆಸ್ಪತ್ರೆಗೆ ಸಿಎಂ ಭೇಟಿ
ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಆರೋಗ್ಯ ಕ್ಷೀಣಿಸಿದ ಹಿನ್ನೆಲೆಯಲ್ಲಿ ಅವರನ್ನು ವಿಕ್ರಂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದರ ಬೆನ್ನಲ್ಲೇ ಆಸ್ಪತ್ರೆಗೆ ಸಿಎಂ ಬಸವರಾಜ್ ಬೊಮ್ಮಾಯಿ ನೀಡಿದ್ದರು. ನಟ ಶಿವರಾಜ್ ಕುಮಾರ್ ಹಾಗೂ ಆಸ್ಪತ್ರೆಯ ವೈದ್ಯರ ಜೊತೆಗೆ ಸಮಾಲೋಚನೆಯನ್ನು ನಡೆಸಿದ್ದಾರೆ.
ಸೈಂಟ್ ಆನ್ಸ್ ಶಾಲೆಗೆ ರಜೆ ಘೋಷಣೆ
ಪುನಿತ್ ಅವರು ದಾಖಲಾಗಿರುವ ವಿಕ್ರಂ ಆಸ್ಪತ್ರೆಯ ಪಕ್ಕದಲ್ಲಿರುವ ಸೈಂಟ್ ಆನ್ಸ್ ಶಾಲೆಗೆ ರಜೆಯನ್ನು ಘೋಷಣೆ ಮಾಡಲಾಗಿದೆ. ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ರಜೆಯನ್ನು ನೀಡಿದ್ದು, ಮಕ್ಕಳನ್ನು ಮನೆಗೆ ಕಳುಹಿಸಿತ್ತು.
ಅಹಿತರ ಘಟನೆ ನಡೆಯದಂತೆ ಕಟ್ಟೆಚ್ಚರ !
ಇನ್ನೊಂದೆಡೆಯಲ್ಲಿ ನಗರ ಪೊಲೀಸ್ ಆಯುಕ್ತರು ಬೆಂಗಳೂರಿನಾದ್ಯಂತ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆಯನ್ನು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಎಲ್ಲಾ ಪೊಲೀಸ್ ಠಾಣೆಗಳಿಗೆ ಸುತ್ತೋಲೆಯನ್ನು ಹೊರಡಿಸಲಾಗಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಮ್ಮ ಪ್ರವಾಸವನ್ನು ಮೊಟಕುಗೊಳಿಸಿ ಬೆಂಗಳೂರಿಗೆ ವಾಪಾಸಾಗಿದ್ದಾರೆ.
ಇದನ್ನೂ ಓದಿ : ಪುನಿತ್ ಮನೆಗೆ ಬಿಗಿ ಭದ್ರತೆ, ಸೈಂಟ್ ಆನ್ಸ್ ಶಾಲೆಗೆ ರಜೆ ಘೋಷಣೆ : ಆಸ್ಪತ್ರೆಗೆ ಸಿಎಂ ಬೊಮ್ಮಾಯಿ ಭೇಟಿ
ಏನೂ ಹೇಳಲು ಸಾಧ್ಯವಿಲ್ಲ ಎಂದಿದ್ದ ವೈದ್ಯರು
ಪುನಿತ್ ರಾಜ್ ಕುಮಾರ್ ಅವರಿಗೆ ಹೃದಯಾಘಾತ ಉಂಟಾದ ಬೆನ್ನಲ್ಲೇ ಅವರನ್ನು ಬೆಳಗ್ಗೆ11.30ಕ್ಕೆ ವಿಕ್ರಂ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಈ ವೇಳೆಯಲ್ಲಿ ಹಿರಿಯ ವೈದ್ಯರ ತಂಡ ಐಸಿಯುನಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು. ಆದ್ರೆ ಚಿಕಿತ್ಸೆಯನ್ನು ನೀಡುತ್ತಿದ್ದ ವೈದ್ಯ ಡಾ.ರಂಗನಾಥ ನಾಯಕ್ ಪುನಿತ್ ಅವರ ಆರೋಗ್ಯದ ಬಗ್ಗೆ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದಿದ್ದರು.
ಆಸ್ಪತ್ರಗೆ ಗಣ್ಯಾತಿ ಗಣ್ಯರ ಭೇಟಿ
ಪುನಿತ್ ರಾಜ್ ಕುಮಾರ್ ಅವರು ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಚಿತ್ರರಂಗದ ಖ್ಯಾತ ನಟರಾಗಿರುವ ವಿ.ರವಿಚಂದ್ರನ್, ದರ್ಶನ್, ಯಶ್, ನಟಿ ಶ್ರುತಿ ಸೇರಿದಂತೆ ಹಲವರು ಭೇಟಿ ನೀಡಿದ್ದಾರೆ. ಇನ್ನೊಂದೆಡೆಗೆ ನೆಚ್ಚಿನ ನಟ ಅಸ್ವಸ್ಥಗೊಂಡ ಬೆನ್ನಲ್ಲೇ ಪುನಿತ್ ಅಭಿಮಾನಿಗಳ ದಂಡೇ ಆಸ್ಪತ್ರೆಗೆ ದೌಡಾಯಿಸಿದ್ದರು.
ಇದನ್ನೂ ಓದಿ : ಕ್ಷಣಕ್ಷಣಕ್ಕೂ ಕ್ಷಣಿಸುತ್ತಿದೆ ಪುನಿತ್ ರಾಜ್ ಕುಮಾರ್ ಆರೋಗ್ಯ : ಏನೂ ಹೇಳಲು ಸಾಧ್ಯವಿಲ್ಲ ಎಂದ ವೈದ್ಯರು