ಸಿನಿಮಾ ನಟರು ಏನು ಮಾಡಿದ್ರೂ ಅದನ್ನು ಅವರ ಅಭಿಮಾನಿಗಳು ಶಿರಸಾ ವಹಿಸಿ ಪಾಲಿಸುತ್ತಾರೆ. ಇದರ ಅರಿವಿದ್ದರೂ ನಟರೂ ಸಾಮಾಜಿಕ ಜವಾಬ್ದಾರಿ ಪಾಲಿಸೋದನ್ನು ಮರೆತು ಬಿಡ್ತಾರೆ. ಇಂತಹುದೇ ಸನ್ನಿವೇಶವೊಂದರಲ್ಲಿ ಟ್ರಾಫಿಕ್ ಪೇದೆ ಸಿನಿಮಾನಟರಿಗೆ ಮೌನವಾಗಿ ಪಾಠ ಹೇಳಿದ್ದು, ಸಿನಿಮಾತಂಡ ತಲೆತಗ್ಗಿಸುವಂತಾಗಿದೆ.

ಭಾರತದ ಸಿನಿಇತಿಹಾಸದಲ್ಲಿ ಬಹುನೀರಿಕ್ಷಿತ ಸಿನಿಮಾ ಆರ್.ಆರ್.ಆರ್ ತೆರೆಗೆ ಬರಲು ಸಿದ್ಧವಾಗಿದೆ. ಎಸ್.ಎಸ್.ರಾಜಮೌಳಿ ನಿರ್ದೇಶನದ ಸಿನಿಮಾ ಚಿತ್ರೀಕರಣ ಬಹುತೇಕ ಪೂರ್ಣಗೊಂಡ ಹಿನ್ನೆಲೆಯಲ್ಲಿ ಚಿತ್ರತಂಡ ಮಂಗಳವಾರ ಹೊಸ ಪೋಸ್ಟರ್ ವೊಂದನ್ನು ರಿಲೀಸ್ ಮಾಡಿದೆ.
ಪೋಸ್ಟರ್ ನಲ್ಲಿ ಜ್ಯೂನಿಯರ್ ಎನ್ಟಿಆರ್ ವೇಗವಾಗಿ ಬೈಕ್ ಚಲಾಯಿಸುತ್ತಿರುವಂತೆ ಹಾಗೂ ನಟ ರಾಮ್ ಚರಣ ತೇಜಾ ಹಿಂಬದಿ ಸವಾರಿ ಮಾಡುತ್ತಿರುವಂತೆ ಪೋಟೋ ಬಿಡುಗಡೆ ಮಾಡಲಾಗಿತ್ತು. ಆದರೆ ಈ ಇಬ್ಬರು ನಟರು ಹೆಲ್ಮೆಟ್ ಹಾಕಿರಲಿಲ್ಲ.

ಈ ಪೋಸ್ಟರ್ ನೋಡಿದ ಸೈಬರಾಬಾದ್ ಸಂಚಾರಿ ಪೊಲೀಸ ಪೇದೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಆರ್.ಆರ್.ಆರ್ ಸಿನಿಮಾದ ಪೋಸ್ಟರ್ ಎಡಿಟ್ ಮಾಡಿ, ಇಬ್ಬರೂ ನಾಯಕರಿಗೆ ಹೆಲ್ಮೆಟ್ ತೊಡಿಸಿ ಆಪೋಸ್ಟರ್ ನ್ನು ತಮ್ಮ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆ ಮೂಲಕ ಚಿತ್ರತಂಡ ಮರೆತಿರುವ ಸಾಮಾಜಿಕ ಜವಾಬ್ದಾರಿಯ ಪಾಠ ಹೇಳಿದ್ದಾರೆ.
ಟ್ರಾಫಿಕ್ ಪೊಲೀಸರು ಸರಿಪಡಿಸಿ ಪೋಸ್ಟ್ ಮಾಡಿದ ಆರ್.ಆರ್.ಆರ್. ಸಿನಿಮಾದ ಪೋಸ್ಟರ್ ಸಖತ್ ವೈರಲ್ ಆಗಿದ್ದು, ಜನರು ನಟರು ತಮ್ಮ ಪ್ರಚಾರದ ಜೊತೆಗೆ ಸಂಚಾರಿ ನಿಯಮಗಳನ್ನು ಪಾಲಿಸುವ ಅಗತ್ಯವಿದೆ ಅಂತ ಕಮೆಂಟ್ ಮಾಡ್ತಿದ್ದಾರೆ.

ಅಲ್ಲದೇ ಸೈಬರಾಬಾದ್ ಪೊಲೀಸರು ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಜನರಿಗೆ ಸೂಚನೆ ನೀಡಲು ಈ ಪೋಸ್ಟರ್ ಗಳನ್ನು ಎಲ್ಲೆಡೆ ಶೇರ್ ಮಾಡಿದ್ದಾರೆ.

ಸಿನಿಮಾಗಳಲ್ಲಿ ಹೆಲ್ಮೆಟ್ ಧರಿಸುವುದನ್ನು ಕಡೆಗಣಿಸುವ ದೃಶ್ಯಗಳು ಸಾಮಾನ್ಯವಾಗಿರೋದರಿಂದ ಜನರು ಇದೇ ಮಾದರಿಯನ್ನು ಅನುಸರಿಸಲು ಹೋಗಿ ಅಪಾಯಕ್ಕೆ ಸಿಲುಕುತ್ತಿದ್ದಾರೆ. ಇತ್ತೀಚಿಗಷ್ಟೇ ಕನ್ನಡದ ಖ್ಯಾತ ನಟ ಸಂಚಾರಿ ವಿಜಯ್ ಹೆಲ್ಮೆಟ್ ಇಲ್ಲದ ಪ್ರಯಾಣದ ವೇಳೆ ಅಪಘಾತಕ್ಕೆ ತುತ್ತಾಗಿ ಸಾವನ್ನಪ್ಪಿದ್ದರು.