ದೇಶ ಹಾಗೂ ರಾಜ್ಯ ಕೊರೋನಾ ಎರಡನೇ ಅಲೆಯ ಸಂಕಷ್ಟದಲ್ಲಿ ನಲುಗಿ ಹೋಗಿದೆ. ಎಲ್ಲೆಡೆ ಜನರು ಜೀವನಾವಶ್ಯಕ ವಸ್ತುಗಳಿಗಾಗಿ ಪರದಾಡುತ್ತಿದ್ದಾರೆ. ಹೀಗಾಗಿ ಸ್ಯಾಂಡಲ್ ವುಡ್ ಸೇರಿದಂತೆ ಎಲ್ಲ ಚಿತ್ರರಂಗದ ನಟ-ನಟಿಯರು,ತಂತ್ರಜ್ಞರು,ನಿರ್ಮಾಪಕರು,ನಿರ್ದೇಶಕರು ಜನರಿಗೆ ನೆರವಾಗುತ್ತಿದ್ದು, ಕನ್ನಡದ ಹಾಸ್ಯನಟ ಚಿಕ್ಕಣ್ಣ ಕೂಡ ಜನರ ಕಷ್ಟಕ್ಕೆ ನೆರವಾಗಿದ್ದಾರೆ.

ಲಾಕ್ ಡೌನ್ ಹಿನ್ನೆಲೆಯಲ್ಲಿ ಎಲ್ಲೆಡೆ ಚಿತ್ರೀಕರಣ ಸ್ಥಗತಿಗೊಂಡಿರೋದಿಂದ ನಟ ಚಿಕ್ಕಣ್ಣ ಮೈಸೂರಿನಲ್ಲೇ ವಾಸವಾಗಿದ್ದಾರೆ. ಮೈಸೂರಿನ ತಮ್ಮ ತೋಟದ ಮನೆಯ ಶೌಚಾಲಯ ನಿರ್ಮಾಣ ಸೇರಿದಂತೆ ಹಲವು ಅಗತ್ಯ ಗಾರೆ ಕೆಲಸಗಳಲ್ಲಿ ತೊಡಗಿದ್ದ ಚಿಕ್ಕಣ್ಣ ಇದೀಗ ಅನ್ನದಾನಕ್ಕೆ ಮುನ್ನುಡಿ ಬರೆದಿದ್ದಾರೆ.

ಮೈಸೂರಿನ ನಂಜರಾಜ್ ಬಹಾದ್ದೂರ್ ನಿರಾಶ್ರಿತರ ಛತ್ರ ಹಾಗೂ ಕೆ.ಆರ್.ಆಸ್ಪತ್ರೆ ಹಾಗೂ ಬಸ್ ನಿಲ್ದಾಣದ ಬಳಿ ಊಟ ವಿತರಿಸುತ್ತಿದ್ದಾರೆ. ಪ್ರತಿನಿತ್ಯ 200 ಕ್ಕೂ ಹೆಚ್ಚು ಜನರಿಗೆ ಚಿಕ್ಕಣ್ಣ ಆಹಾರದ ಪ್ಯಾಕ್ ಗಳನ್ನು ವಿತರಿಸುತ್ತಿದ್ದಾರೆ.

ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಚಿಕ್ಕಣ್ಣ, ನನಗೆ ಹಸಿವಿನ ಬೆಲೆ ಗೊತ್ತಿದೆ. ಹೀಗಾಗಿ ನಾನು ನನ್ನ ಕೈಲಾದಷ್ಟು ಜನರಿಗೆ ಆಹಾರ ಒದಗಿಸುತ್ತಿದ್ದೇನೆ. ಆದರೆ ಈ ರೀತಿ ದಾನ ಮಾಡುವ ಪರಿಸ್ಥಿತಿ ಯಾರಿಗೂ ಬರಬಾರದು. ಜನರ ಕಷ್ಟ ನೋಡಲಾಗುತ್ತಿಲ್ಲ. ಹೀಗಾಗಿ ಕೊರೋನಾ ಬೇಗ ಕೊನೆಗೊಳ್ಳಲಿ ಎಂದಿದ್ದಾರೆ.

ಕೂಲಿ ಹಾಗೂ ಗಾರೆ ಮೇಸ್ತ್ರಿ ಕೆಲಸ ಮಾಡುತ್ತಿದ್ದ ಚಿಕ್ಕಣ್ಣ ಸಿನಿಮಾ ನಟನಾಗಬೇಕೆಂಬ ಕಾರಣಕ್ಕೆ ಸಾಕಷ್ಟು ಕಷ್ಟ ಪಟ್ಟಿದ್ದು, ಈಗ ಸ್ಯಾಂಡಲ್ ವುಡ್ ಬಹುಬೇಡಿಕೆಯ ಹಾಸ್ಯನಟರಾಗಿ ಗುರುತಿಸಿಕೊಂಡಿದ್ದಾರೆ.
