ಚಿರಂಜೀವಿ ಸರ್ಜಾ ಪಾಲಿಗೆ 2020 ಅಕ್ಟೋಬರ್ ಮರೆಯಲಾಗದ ವರ್ಷವಾಗಲಿತ್ತು. ಯಾಕೆಂದ್ರೆ ಈ ತಿಂಗಳಿನಲ್ಲೇ ಅಂದ್ರೆ ಅವರು ಹುಟ್ಟಿದ ತಿಂಗಳಿನಲ್ಲೇ ಅವರ ಮಗುವು ಭೂಮಿಗೆ ತಂದು ಅವರ ಸಂಭ್ರಮ ಹೆಚ್ಚಿಸಬೇಕಿತ್ತು. ಆದರೆ ಈ ಖುಷಿಗಳನ್ನು ಅನುಭವಿಸೋಕೆ ಅವರೇ ಭೂಮಿ ಮೇಲಿಲ್ಲ. ಆದರೂ ಈ ಅಕ್ಟೋಬರ್ ನಲ್ಲಿ ಸರ್ಜಾ ಕುಟುಂಬ ಹಾಗೂ ಮೇಘನಾ ಮುಖದಲ್ಲಿ ಮತ್ತೊಮ್ಮೆ ನಗು ಅರಳಲಿದೆ.

ಕಳೆದ ಮೂರ್ನಾಲ್ಕು ತಿಂಗಳಿನಿಂದ ದುಃಖದಲ್ಲೇ ದಿನದೂಡಿರುವ ಸರ್ಜಾ ಕುಟುಂಬದ ಪಾಲಿಗೆ ಈಗಾಗಲೇ ಮೇಘನಾ ಡೆಲಿವರಿ, ಧ್ರುವ ಸರ್ಜಾ ಚಿತ್ರದ ಮುಹೂರ್ತ, ಚಿರು ಹುಟ್ಟುಹಬ್ಬ ಹಾಗೂ ಚಿರಂಜೀವಿ ಸರ್ಜಾ ಅಭಿನಯದ ಸಿನಿಮಾ ಶಿವಾರ್ಜುನ್ ರೀ ರಿಲೀಸ್ ವಿಚಾರ ಖುಷಿ ತಂದಿದೆ.

ಈ ಪುಟ್ಟ-ಪುಟ್ಟ ಖುಷಿಗಳ ಜೊತೆ ಇನ್ನೊಂದು ದೊಡ್ಡ ಖುಷಿಯೂ ಇದೇ ತಿಂಗಳು ಸೇರ್ಪಡೆಯಾಗಲಿದ್ದು, ಚಿರಂಜೀವಿ ಅಭಿನಯದ ಕೊನೆಯ ಚಿತ್ರ ರಣಂ ನ್ನು ಅಕ್ಟೋಬರ್ 23 ರಂದು ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಚಿರಂಜೀವಿ ಸರ್ಜಾ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಇದೇ ತಿಂಗಳಿನಲ್ಲಿ ಚಿತ್ರ ರಿಲೀಸ್ ಮಾಡಿ ಅವರ ಅಭಿಮಾನಿಗಳಿಗೆ ಖುಷಿ ಹಾಗೂ ಸಪ್ರೈಸ್ ನೀಡೋ ಪ್ಲ್ಯಾನ್ ನಮ್ಮದು ಎಂದು ಚಿತ್ರತಂಡ ಹೇಳಿಕೊಂಡಿದೆ.

ದೀಪಾವಳಿ ವೇಳೆ ಬಿಡುಗಡೆಯಾಗಬೇಕಿದ್ದ ಸಿನಿಮಾ ಒಂದು ತಿಂಗಳ ಮೊದಲೇ ದಸರಾ ಸಂಭ್ರಮದಲ್ಲಿ ತೆರೆಗೆ ಬರಲಿದೆ. ಇದರಿಂದ ತಿಂಗಳು ಪೂರ್ತಿ ಚಿರಂಜೀವಿ ಸರ್ಜಾ ಮತ್ತೆ ನಮ್ಮ ಮನೆ-ಮಾನಸದಲ್ಲಿ ಸದ್ದು ಮಾಡಲಿದ್ದಾರೆ.

ಕನಕಪುರ ಶ್ರೀನಿವಾಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಖಡಕ್ ಖಾಕಿ ಲುಕ್ ನಲ್ಲಿ ಕಂಡುಬಂದಿದ್ದರು. ವಿ.ಸಮುದ್ರ ನಿರ್ದೇಶನದ ಈ ಚಿತ್ರದಲ್ಲಿ ಚೇತನ್ ಕುಮಾರ್ ಚಿರು ಜೊತೆ ಕಾಣಿಸಿಕೊಂಡಿದ್ದು, ವರಲಕ್ಷ್ಮೀ ನಾಯಕಿಯಾಗಿ ನಟಿಸಿದ್ದಾರೆ. ಇದೊಂದು ಆಕ್ಷ್ಯನ್ ಮತ್ತು ಥ್ರಿಲ್ಲರ್ ಮೂವಿ ಎಂದು ಚಿತ್ರತಂಡ ಹೇಳಿದೆ.

ಸಾಧುಕೋಕಿಲ್,ನೀತುಗೌಡ್, ದೇವ್ ಗಿಲ್, ಇತ್ತೀಚಿಗೆ ನಿಧನರಾದ ಹಾಸ್ಯನಟ ಬುಲೆಟ್ ಪ್ರಕಾಶ್ ಕೂಡ ಚಿತ್ರದಲ್ಲಿದ್ದಾರೆ. ಚಿರು ಅಭಿಮಾನಿಗಳನ್ನು ಗಮನದಲ್ಲಿಟ್ಟುಕೊಂಡು ಈ ಚಿತ್ರವನ್ನು ನಿಗದಿಗಿಂತ ಮೊದಲೇ ರಿಲೀಸ್ ಮಾಡಲಾಗುತ್ತಿದ್ದು, 200-300 ಥಿಯೇಟರ್ ಗಳಲ್ಲಿ ಏಕಕಾಲಕ್ಕೆ ಚಿತ್ರ ಬಿಡುಗಡೆ ಮಾಡುವ ಪ್ಲ್ಯಾನ್ ಇದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

ಒಟ್ಟಿನಲ್ಲಿ ಈ ಅಕ್ಟೋಬರ್ ಕೊಂಚ ಮಟ್ಟಿಗೆ ಚಿರು ಅಭಿಮಾನಿಗಳ ದುಃಖ ಕಡಿಮೆ ಮಾಡಲಿದ್ದು, ಥಿಯೇಟರ್ ನಲ್ಲಿ ಒಟ್ಟೊಟ್ಟಿಗೆ ಎರಡೆರಡು ಚಿತ್ರ ನೋಡಿ ಸಂಭ್ರಮಿಸೋ ಅವಕಾಶ ಸಿಗಲಿದೆ.