ಕೊಪ್ಪಳ: ಚಿತ್ರಸಾಹಿತಿ ಕೆ.ಕಲ್ಯಾಣ ಬದುಕಿನಲ್ಲಿ ವಿರಸ ಮೂಡಿಸಿ ಅವರ ಪತ್ನಿಯನ್ನು ಅಪಹರಿಸಿದ್ದು ಸೇರಿದಂತೆ ಆಸ್ತಿ ಲಪಟಾಯಿಸಿದ ಆರೋಪ ಎದುರಿಸುತ್ತಿದ್ದ ಆರೋಪಿ ಗಂಗಾ ಕುಲಕರ್ಣಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ನ್ಯಾಯಾಲಯಕ್ಕೆ ಆಗಮಿಸಿದ್ದ ಗಂಗಾ ಕುಲಕರ್ಣಿ ಕುಸಿದು ಬಿದ್ದಿದ್ದು ಅವರನ್ನು ತಕ್ಷಣ ಕುಷ್ಟಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ದಾಖಲಿಸಿದ ವೇಳೆ ಗಂಗಾ ಕುಲಕರ್ಣಿ ವಿಷ ಸೇವಿಸಿರೋದು ಬಹಿರಂಗವಾಗಿದೆ.

ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದಲೇ ನ್ಯಾಯಾಲಯಕ್ಕೆ ಬರುವಾಗ ಗಂಗಾ ವಿಷ ಸೇವಿಸಿ ಆಗಮಿಸಿದ್ದರು ಎನ್ನಲಾಗುತ್ತಿದೆ. ಇತ್ತೀಚಿಗಷ್ಟೇ ಚಿತ್ರಸಾಹಿತಿ ಕೆ.ಕಲ್ಯಾಣ ಪತಿ ಕೌಟುಂಬಿಕ ಕಲಹದಿಂದ ವಿಚ್ಛೇದನ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಪ್ರಕರಣ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಕೆ.ಕಲ್ಯಾಣ ತಮ್ಮ ಪತ್ನಿ ನಾನು ಸುಖವಾಗಿದ್ದು, ಈ ಗಂಗಾ ಕುಲಕರ್ಣಿ ನಮ್ಮ ಬದುಕಿನಲ್ಲಿ ವಿಲನ್ ಆಗಿದ್ದಾಳೆ ಎಂದಿದ್ದರು.

ಆ ಬಳಿಕ ತನಿಖೆ ಕೈಗೊಂಡ ಪೊಲೀಸರಿಗೆ ಗಂಗಾ ಕುಲಕರ್ಣಿ ಕೆ.ಕಲ್ಯಾಣ ಪತ್ನಿ ಅಶ್ವಿನಿಯವರಿಗೆ ವಿವಿಧ ರೀತಿಯಲ್ಲಿ ಕಷ್ಟ ನೀಡಿದ್ದು ಹಾಗೂ ಅವರಿಂದ ಅಪಾರ ಪ್ರಮಾಣದ ಆಸ್ತಿ ಲಪಟಾಯಿಸಿದ್ದು ಬೆಳಕಿಗೆ ಬಂದಿತ್ತು. ಹೀಗಾಗಿ ಗಂಗಾ ಕುಲಕರ್ಣಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಆಕೆಯನ್ನು ಬಂಧಿಸಲಾಗಿತ್ತು.

ಬಳಿಕ ಜಾಮೀನು ಪಡೆದು ಹೊರಬಂದಿದ್ದ ಗಂಗಾ ಕುಲಕರ್ಣಿ ಇಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈಕೆ 2016 ರಲ್ಲಿ ಕ್ಯಾದಿಗುಪ್ಪ ಗ್ರಾಮದ ಯುವಕನೊರ್ವನಿಗೆ ಕೆಲಸ ಕೊಡಿಸುವುದಾಗಿ ವಂಚಿಸಿ 3 ಲಕ್ಷ ರೂಪಾಯಿ ಪಡೆದಿದ್ದಳು. ಈ ವೇಳೆಯೂ ಗಂಗಾ ಕುಲಕರ್ಣಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.