ಸಿನಿಮಾ ಜಗತ್ತಿನ ಇದುವರೆಗಿನ ಎಲ್ಲ ದಾಖಲೆಗಳನ್ನು ಮುರಿದು ಮುಂದೇ ಸಾಗುತ್ತಿರುವ ಕೆಜಿಎಫ್-2 ಟೀಸರ್ ರಿಲೀಸ್ ಆದ ಎರಡೇ ದಿನದಲ್ಲಿ 100 ಮಿಲಿಯನ್ ವೀಕ್ಷಣೆ ಕಂಡಿದ್ದು, ಎಲ್ಲ ಸಾರ್ವಕಾಲಿಕ ದಾಖಲೆಗಳನ್ನು ಹಿಂದಿಕ್ಕಿದೆ. ಇದಕ್ಕೆ ಹೊಂಬಾಳೆ ಫಿಲ್ಮ್ಸ್ ಹಾಗೂ ಚಿತ್ರತಂಡ ಧನ್ಯವಾದ ಹೇಳಿದೆ.

ಭಾರತದ ಹಾಗೂ ವಿಶ್ವದ ಸಿನಿ ಇತಿಹಾಸದಲ್ಲೇ ಟೀಸರ್ ವೊಂದು ಇಷ್ಟು ಕಡಿಮೆ ಅವಧಿಯಲ್ಲಿ 100 ಮಿಲಿಯನ್ ವೀಕ್ಷಣೆ ಕಂಡ ದಾಖಲೆ ಇಲ್ಲ. ಗುರುವಾರ ರಾತ್ರಿ 9.30 ಕ್ಕೆ ರಿಲೀಸ್ ಆದ ಕೆಜಿಎಫ್-2 ಟೀಸರ್ ಈಗಾಗಲೇ 100 ಮಿಲಿಯನ್ ವೀಕ್ಷಣೆಗೊಳಗಾಗಿದ್ದು, ಈ ಲೆಕ್ಕಾಚಾರ ಇನ್ನಷ್ಟು ಹೆಚ್ಚಲಿದೆ.
ಇದುವರೆಗೂ ಎಸ್.ಎಸ್.ರಾಜಮೌಳಿ ನಿರ್ದೇಶನದ ಬಾಹುಬಲಿ-2 ಟ್ರೇಲರ್ 112 ಮಿಲಿಯನ್ ವೀಕ್ಷಣೆ ಕಂಡಿದೆ. ಈಗ ಕೆಜಿಎಫ್-2 ಟೀಸರ್ ಈಗಲೇ 100 ಮಿಲಿಯನ್ ದಾಟಿದ್ದು, ಬಾಹುಬಲಿ ದಾಖಲೆಯನ್ನು ಕೆಜಿಎಫ್ ಮುರಿಯೋದು ಖಚಿತವಾಗುತ್ತಿದೆ.
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್-2 ಟೀಸರ್ ನ್ನು ರಾಕಿಂಗ್ ಸ್ಟಾರ್ ಯಶ್ ಬರ್ತಡೇಗೆ ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿತ್ತು. ಹೀಗಾಗಿ ಜನವರಿ 8 ರ ಬೆಳಗ್ಗೆ 10.18 ಕ್ಕೆ ಟೀಸರ್ ರಿಲೀಸ್ ಆಗಬೇಕಿತ್ತು. ಆದರೆ ಗುರುವಾರ ಅಂದ್ರೆ ಜನವರಿ 7 ರಂದು ಸಂಜೆಯೇ ಟೀಸರ್ ಲೀಕಾಗಿತ್ತು.

ತಕ್ಷಣವೇ ಚಿತ್ರತಂಡ ಟೀಸರ್ ರಿಲೀಸ್ ಮಾಡಿತ್ತು. ಇದುವರೆಗೂ ಚಿತ್ರದ ಟೀಸರ್ 100 ಮಿಲಿಯನ್ ವೀಕ್ಷಣೆ ಕಂಡಿದ್ದು, ಬಾಲಿವುಡ್,ಹಾಲಿವುಡ್ ಚಿತ್ರಗಳ ದಾಖಲೆಯನ್ನು ಮುರಿದಿದೆ.

ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರಾಜ್, ಶ್ರೀನಿಧಿ ಶೆಟ್ಟಿ ಸೇರಿದಂತೆ ಹಲವು ಖ್ಯಾತನಾಮರು ನಟಿಸಿರುವ ಈ ಚಿತ್ರದ ಶೂಟಿಂಗ್ ಮುಕ್ತಾಯಗೊಂಡಿದ್ದು, ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.