ಎಲ್ಲಿಂದಲೋ ಬಂದು ನಮ್ಮ ಬದುಕನ್ನು ಮೂರಾಬಟ್ಟೆ ಮಾಡಿದ ಕರೋನಾ ವೈರಸ್ ಸೆಲಿಬ್ರೆಟಿಗಳನ್ನು ಬಿಟ್ಟಿಲ್ಲ. ಜನಸಾಮಾನ್ಯರು ಲಾಕ್ ಡೌನ್ ನಿಂದ ಸಂಕಷ್ಟಕ್ಕಿಡಾದಂತೆ ಕನ್ನಡದ ಖ್ಯಾತ ಗಾಯಕರೊಬ್ಬರು ಕೂಡ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಸಾಲ ತೀರಿಸಲಾಗದೇ ತಮ್ಮ ಪ್ರೀತಿಯ ಬೈಕ್ ಮಾರಿ ಬದುಕಿದ ಸಂಕಷ್ಟವನ್ನು ಮಾಧ್ಯಮಗಳ ಮುಂದೆ ತೋಡಿಕೊಂಡಿದ್ದಾರೆ.

ಖ್ಯಾತ ಹಿನ್ನೆಲೆ ಗಾಯಕ ರಘು ದೀಕ್ಷಿತ್ ಕೂಡ ಮಹಾಮಾರಿ ಕೊರೋನಾದಿಂದ ಸಮಸ್ಯೆಗೀಡಾಗಿದ್ದು, ಬದುಕೋದು ಹೇಗೆ ಅನ್ನೋ ಪ್ರಶ್ನೆ ಎದುರಾಗಿದೆಯಂತೆ. ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ಕಷ್ಟ ಹೇಳಿಕೊಂಡಿರುವ ರಘು ದೀಕ್ಷಿತ್, ನಮಗೆ ತಿಂಗಳ ಸಂಬಳವಿಲ್ಲ. ಕೆಲಸ ಮಾಡಿದರಷ್ಟೇ ಸಂಬಳ. ಆದರೆ ಲಾಕ್ ಡೌನ್ ನಿಂದಾಗಿ ಆದಾಯವೇ ನಿಂತು ಹೋಗಿದೆ.

ಸಾಂಸ್ಕೃತಿಕ ಕಾರ್ಯಕ್ರಮಗಳು, ಸ್ಟೇಜ್ ಶೋ, ಸಿನಿಮಾ ಹೀಗೆ ನಮ್ಮ ಅನ್ನದ ದಾರಿಗಳೆಲ್ಲ ಮುಚ್ಚಿದ್ದರಿಂದ ಮನೆ ನಿರ್ವಹಣೆಯೇ ಕಷ್ಟ ಎನ್ನುವ ಸ್ಥಿತಿ ಎದುರಾಗಿದೆ. ನಾನು ಲಾಕ್ ಡೌನ್ ಗೂ ಒಂದೆರಡು ಹಾಡು ಕಂಪೋಸ್ ಮಾಡಿ ಹೊಸ ಚಿತ್ರಗಳಿಗೆ ಸಜ್ಜಾಗಿದ್ದೆ. ಆದರೆ ಈ ವೈರಸ್ ಎಲ್ಲ ಹಾಳು ಮಾಡಿತು. ಎಲ್ಲ ಚಟುವಟಿಕೆಗಳು ನಿಂತು ಹೋದವು.

ಕೊನೆ-ಕೊನೆಗೆ ಜೀವನ ನಿರ್ವಹಣೆಯೇ ಕಷ್ಟವಾಯಿತು. ಇಷ್ಟ ಪಟ್ಟು ಕೊಂಡಿದ್ದ ಬೈಕ್ ಸಾಲದ ಕಂತು ಕಟ್ಟಲು ಸಾಧ್ಯವಾಗಲಿಲ್ಲ. ಹೀಗಾಗಿ ಬೈಕ್ ನ್ನೇ ಮಾರಿದ್ದೇನೆ. ಮೊದಲು ಸಂಕಷ್ಟದಲ್ಲಿದ್ದವರ ಫಂಡ್ ಗಾಗಿ ಹಾಡಿ ಮನವಿ ಮಾಡಿದೇವು. ಈಗ ನಮಗೂ ಯಾರಾದ್ರೂ ಸಹಾಯ ಮಾಡಿ, ಫಂಡ್ ರೈಸ್ ಮಾಡಿ ಎಂದು ಮನವಿ ಮಾಡುವ ಸ್ಥಿತಿಯಲ್ಲಿದ್ದೇವೆ ಎಂದು ನೋವಿನಿಂದ ಹೇಳಿದ್ದಾರೆ.

ನಾವೆಲ್ಲ ಇಷ್ಟು ಕಷ್ಟದಲ್ಲಿದ್ದೇವೆ ಎಂದರೇ ಯಾರು ನಂಬುವುದಿಲ್ಲ. ಆದರೆ ಸಂಪಾದನೆಯ ದಾರಿಯೇ ನಿಂತು ಹೋಗಿದೆ. ಹೀಗಾಗಿ ನಮ್ಮ ಕಷ್ಟದ ದಿನಗಳು ಕಣ್ಮುಂದಿವೆ ಎಂದಿದ್ದಾರೆ. ಕೊರೋನಾ ಸಂಕಷ್ಟದ ನಡುವೆಯೇ ಇತ್ತೀಚಿಗೆ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡಿದ್ದ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲೂ ಆರಂಭದಲ್ಲಿ ರಘು ದೀಕ್ಷಿತ್ ಹೆಸರು ಕೇಳಿಬಂದಿತ್ತು.