ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ನಡುವಲ್ಲೇ ಆಂಧ್ರ ಸರಕಾರ ಶಾಲೆಗಳನನ್ನು ಆರಂಭಿಸಿತ್ತು. ಆಂಧ್ರ ಮಾದರಿಯಲ್ಲಿಯೇ ಕರ್ನಾಟಕದಲ್ಲಿಯೂ ಶಾಲೆಗಳನ್ನು ತೆರೆಯಲು ರಾಜ್ಯ ಸರಕಾರ ಸಿದ್ದತೆ ಮಾಡಿಕೊಳ್ಳುತ್ತಿದೆ. ಆದರೆ ಆಂಧ್ರದಲ್ಲಿ ವಿದ್ಯಾರ್ಥಿ ಹಾಗೂ ಶಿಕ್ಷಕ ರಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ರಾಜ್ಯದ ಶಿಕ್ಷಣ ಇಲಾಖೆಗೆ ಶಾಕ್ ಕೊಟ್ಟಿದೆ.

ಆಂಧ್ರಪ್ರದೇಶದಲ್ಲಿ ನವೆಂಬರ್ 2 ರಂದು 9 ಮತ್ತು 10ನೇ ತರಗತಿಗಳನ್ನು ಆರಂಭಿಸಲಾಗಿತ್ತು. ಆರಂಭದ ದಿನವೇ 65ಕ್ಕೂ ಅಧಿಕ ವಿದ್ಯಾರ್ಥಿ ಹಾಗೂ ಶಿಕ್ಷಕರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಆದರೆ ದಿನೇ ದಿನೇ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಪ್ರಮಾಣ ದಲ್ಲಿ ಏರಿಕೆಯನ್ನು ಕಾಣುತ್ತಿದೆ. ಮೂರನೇ ದಿನವಾದ ನಿನ್ನೆ 575 ವಿದ್ಯಾರ್ಥಿಗಳಿಗೆ 820 ಶಿಕ್ಷಕರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿರುವುದು ಆತಂಕವನ್ನು ಮೂಡಿಸಿದೆ.
9 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು 9 ಮತ್ತು 10ನೇ ತರಗತಿಗೆ ನೋಂದಣಿ ಮಾಡಿಸಿಕೊಂಡಿದ್ದರು ಕೂಡ ಕೇವಲ 4 ಲಕ್ಷ ವಿದ್ಯಾರ್ಥಿಗಳು ಮಾತ್ರವೇ ಶಾಲೆಗೆ ಹಾಜರಾಗಿದ್ದರು. ಶಾಲಾರಂಭದ ದಿನದಿಂದಲೇ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಕೊರೊನಾ ತಪಾಸಣೆಯನ್ನು ಮಾಡಲಾಗುತ್ತಿದ್ದು, ಕೊರೊನಾ ಸೋಂಕಿತ ಶಿಕ್ಷಕರ, ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ದಿನೇ ದಿನೇ ಏರಿಕೆಯಾಗುತ್ತಿದೆ.

ಆಂಧ್ರ ಪ್ರದೇಶ ಸರಕಾರ ಶಾಲೆಗಳನ್ನು ಆರಂಭಿಸುತ್ತಿದ್ದಂತೆಯೇ ಕರ್ನಾಟಕದಲ್ಲಿಯೂ ಶಾಲೆಗಳನ್ನು ತೆರೆಯಲು ರಾಜ್ಯ ಸರಕಾರ ಸಿದ್ದತೆ ಗಳನ್ನು ಮಾಡಿಕೊಂಡಿದೆ. ರಾಜ್ಯದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹಾಗೂ ಶಿಕ್ಷಣ ಇಲಾಖೆ ಶಾಲಾರಂಭಕ್ಕೆ ಉತ್ಸುಕವಾಗಿದೆ. ಶಿಕ್ಷಣ ಇಲಾಖೆಯ ಆಯುಕ್ತರು ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಎಸ್ ಡಿಎಂಸಿ, ಶಿಕ್ಷಕರು, ಪೋಷಕರ ಸಲಹೆಗಳನ್ನು ಪಡೆದ ನಂತರವೇ ಶಾಲೆಗಳನ್ನು ತೆರೆಯುವುದಾಗಿ ಶಿಕ್ಷಣ ಸಚಿವರು ತಿಳಿಸಿದ್ದರು. ಅಲ್ಲದೇ ಆಂಧ್ರದಲ್ಲಿನ ಸ್ಥಿತಿಗತಿಯನ್ನು ಅವಲೋಕನ ಮಾಡುತ್ತಿದ್ದೇವೆ ಎಂದಿದ್ದರು.
ಆದ್ರೆ ಆಂಧ್ರಪ್ರದೇಶ ಮಾದರಿಯಲ್ಲಿ ಶಾಲೆಗಳನ್ನು ತೆರೆಯಲು ಸಿದ್ದತೆ ಮಾಡಿಕೊಂಡಿದ್ದ ಶಿಕ್ಷಣ ಇಲಾಖೆಗೆ ಇದೀಗ ಆಂಧ್ರದಲ್ಲಿ ಶಾಲಾರಂಭ ದ ನಂತರ ಹೆಚ್ಚುತ್ತಿರುವ ಕೊರೊನಾ ಸೋಂಕಿತರ ಪ್ರಮಾಣ ತಲೆನೋವು ತರಿಸಿದೆ. ಇನ್ನೊಂದೆಡೆ ಬಹುತೇಕ ಪೋಷಕರು ಕೂಡ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಎಚ್ಚರಿಕೆಯ ಹೆಜ್ಜೆಯನ್ನಿರಿಸ ಬೇಕಾದ ಅಗತ್ಯವಿದೆ.