ನವದೆಹಲಿ : ದೇಶದಾದ್ಯಂತ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ನವೆಂಬರ್ 30ರ ವರೆಗೆ ಶಾಲೆಗಳನ್ನು ತೆರೆಯದಂತೆ ಕೇಂದ್ರ ಸರಕಾರ ಆದೇಶ ಹೊರಡಿಸಿದೆ.

ನವೆಂಬರ್ ತಿಂಗಳಿನಲ್ಲಿ ಹಲವು ರಾಜ್ಯಗಳು ಶಾಲೆಗಳನ್ನು ತೆರೆಯಲು ಸಿದ್ದತೆ ಮಾಡಿಕೊಳ್ಳುತ್ತಿವೆ. ಆದರೆ ಕೊರೊನಾ ಸೋಂಕು ಹಲವು ರಾಜ್ಯಗಳಲ್ಲಿ ಹೆಚ್ಚುತ್ತಿದ್ದು, ಮುಂದಿನ ಎರಡು ತಿಂಗಳಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗಲಿದೆ ಅಂತ ತಜ್ಞರು ಹೇಳುತ್ತಿದ್ದಾರೆ. ಈ ನಡುವಲ್ಲೇ ಕೇಂದ್ರ ಗೃಹ ಕಾರ್ಯದರ್ಶಿ ಅವರು ಮಹತ್ವದ ಆದೇಶವನ್ನು ಹೊರಡಿಸಿದ್ದಾರೆ. ಈ ಹಿಂದೆ ಅಗಸ್ಟ್ 30ರಂದು ಹೊರಡಿಸಲಾಗಿರುವ ಮಾರ್ಗಸೂಚಿ ನವೆಂಬರ್ 30ರ ವರೆಗೆ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಶಾಲೆಗಳನ್ನು ತೆರೆಯುವ ಕುರಿತು ಈಗಾಗಲೇ ಸಾಕಷ್ಟು ವಿರೋಧಗಳು ವ್ಯಕ್ತವಾಗಿತ್ತು. ಹೀಗಾಗಿ ಶಾಲೆಗಳನ್ನು ಸದ್ಯಕ್ಕೆ ತೆರೆಯದೇ ಇರಲು ರಾಜ್ಯ ಸರಕಾರ ಮುಂದಾಗಿದೆ. ಅಲ್ಲದೇ ವಿದ್ಯಾಗಮ ಯೋಜನೆಯಿಂದಲೂ ಕೊರೊನಾ ಸೋಂಕು ಹರಡಿದ ಬೆನ್ನಲ್ಲೇ ವಿದ್ಯಾಗಮ ಯೋಜನೆಯನ್ನೂ ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.

ಇದೀಗ ನವೆಂಬರ್ 30ರ ವರೆಗೆ ಶಾಲೆಗಳನ್ನು ತೆರೆಯದಂತೆ ಕೇಂದ್ರ ಸರಕಾರ ಆದೇಶ ಹೊರಡಿಸಿ ರುವುದರಿಂದಾಗಿ ವರ್ಷಾಂತ್ಯದ ವರೆಗೆ ಶಾಲೆಗಳು ಪುನರಾರಂಭವಾಗೋದು ಅನುಮಾನ.
