ಶಿವಮೊಗ್ಗ : ಧರ್ಮದರ್ಶಿ ಹಾಗೂ ಅರ್ಚಕರ ನಡುವಿನ ತಿಕ್ಕಾಟದ ಬೆನ್ನಲ್ಲೇ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಮೇಲ್ವಿಚಾರಣೆ ಹಾಗೂ ಸಲಹಾ ಸಮಿತಿ ನೇಮಿಸಲಾಗಿದೆ. ಆದ್ರೀಗ ರಾಜ್ಯ ಸರಕಾರ ನೇಮಕ ಮಾಡಿರುವ ಸಮಿತಿಯ ವಿರುದ್ದ ಅಪಸ್ವರ ಕೇಳಿಬಂದಿದೆ.

ದೇವಸ್ಥಾನವನ್ನು ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರ್ಪಡೆಗೊಳಿಸಲು ತೆರೆಮರೆಯಲ್ಲೇ ಕಸರತ್ತು ನಡೆಯುತ್ತಿದೆ ಅನ್ನೋ ಮಾತುಗಳು ಕೇಳಿಬಂದಿದ್ದು, ಈಡಿಗ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಸಿಗಂದೂರು ಚೌಡೇಶ್ವರಿ ದೇವಿಯನ್ನು ಪೂರ್ವಜರ ಕಾಲದಿಂದಲೂ ದೇವಸ್ಥಾನದ ಧರ್ಮದರ್ಶಿಯಾಗಿ ರುವ ರಾಮಪ್ಪ ಅವರ ಕುಟುಂಬ ಮನೆ ದೇವರಾಗಿ ಆರಾಧಿಸಿಕೊಂಡು ಬಂದಿದೆ. ತದನಂತರದಲ್ಲಿ ದೇವಸ್ಥಾನದಲ್ಲಿ ಹಲವು ಅಭಿವೃದ್ದಿ ಕಾರ್ಯಗಳನ್ನು ನಡೆಸೋ ಮೂಲಕ ರಾಜ್ಯದ ಪ್ರಮುಖ ಪುಣ್ಯಸ್ಥಳವಾಗಿ ಮಾರ್ಪಟ್ಟಿದೆ. ದೇವಸ್ಥಾನದ ಧರ್ಮದರ್ಶಿ ರಾಮಪ್ಪ ಹಾಗೂ ಅರ್ಚಕರಾಗಿರುವ ಶೇಷಗಿರಿ ಭಟ್ ಅವರು ದೇವಸ್ಥಾನದಲ್ಲಿ ಹಲವು ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡಿದ್ದರು.

ಆದರೆ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಚಂಡಿಕಾ ಹೋಮ ನಡೆಸುವ ವಿಚಾರಕ್ಕೆ ಅರ್ಚಕ ಶೇಷಗಿರಿ ಭಟ್ ಹಾಗೂ ಧರ್ಮದರ್ಶಿ ರಾಮಪ್ಪ ಅವರಿಗೆ ವೈಮನಸ್ಸು ಏರ್ಪಟ್ಟಿತ್ತು.
ಇಬ್ಬರ ನಡುವಿನ ತಿಕ್ಕಾಟ ಹೆಚ್ಚಾಗಿ, ಅರ್ಚಕ ಶೇಷಗಿರಿ ಭಟ್ ಹಾಗೂ ಅವರ ಸಹೋದರ ಧರ್ಮದರ್ಶಿ ರಾಮಪ್ಪ ಹಾಗೂ ಅವರ ಮಗನ ಮೇಲೆ ಹಲ್ಲೆ ನಡೆಸುತ್ತಿದ್ದಂತೆಯೇ ದೇವಸ್ಥಾನದಲ್ಲಿ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಬಯಲಾಗಿತ್ತು. ಕಾಣಿಕೆ ಹುಂಡಿ ವಿಚಾರವಾಗಿಯೂ ವಿವಾದ ಏರ್ಪಟ್ಟಿತ್ತು. ಇದೇ ಕಾರಣಕ್ಕೆ ರಾಜ್ಯ ಸರಕಾರ ಮಧ್ಯಪ್ರವೇಶ ಮಾಡಿದೆ.

ಈ ನಡುವಲ್ಲೇ ಶಿವಮೊಗ್ಗ ಜಿಲ್ಲಾಧಿಕಾರಿಗಳು ದೇವಸ್ಥಾನಕ್ಕೆ ಮೇಲ್ವಿಚಾರಣೆ ಮತ್ತು ಸಲಹಾ ಸಮಿತಿಯನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದರು. ದೇವಸ್ಥಾನದಲ್ಲಿ ಹಣಕಾಸಿನ ವಿಚಾರದಲ್ಲಿ ಕಣ್ಣಿಡುವ ಸಲುವಾಗಿಯೇ ಈ ಸಮಿತಿಯನ್ನು ನೇಮಕ ಮಾಡಲಾಗಿದೆ. ಆದರೆ ಯಾವುದೇ ಕಾರಣಕ್ಕೂ ದೇವಸ್ಥಾನವನ್ನು ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರ್ಪಡೆ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದರು.

ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು, ಅಧಿಕಾರಿಗಳನ್ನು ಒಳಗೊಂಡ ಮೇಲ್ವಿಚಾರಣೆ ಮತ್ತು ಸಲಹಾ ಸಮಿತಿಯ ವಿರುದ್ದ ಈಡಿಗ ಸಮುದಾಯ ಕೆರಳಿಸಿದೆ. ದೇವಸ್ಥಾನದ ಧರ್ಮದರ್ಶಿ ರಾಮಪ್ಪ ಅವರ ವಾದವನ್ನು ಆಲಿಸದೇ ಜಿಲ್ಲಾಡಳಿತ ಏಕಾಏಕಿಯಾಗಿ ಸಮಿತಿಯನ್ನು ರಚಿಸಿರುವುದರ ಹಿಂದೆ ದೇವಸ್ಥಾನವನ್ನು ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರ್ಪಡೆಗೊಳಿಸುವ ಹುನ್ನಾವಿದೆ ಅನ್ನೋ ಆರೋಪ ಕೇಳಿಬಂದಿದೆ. ಹಿಂದುಳಿದ ವರ್ಗಗಳ ಆಡಳಿತದಲ್ಲಿರುವ ದೇವಸ್ಥಾನವನ್ನು ಸರಕಾರ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಸಲುವಾಗಿ ಸಮತಿಯನ್ನು ನೇಮಿಸಿದೆ ಅನ್ನೋ ಆತಂಕ ಈಡಿಗ ಸಮುದಾಯದರವನ್ನು ಕಾಡುತ್ತಿದೆ.

ಸಿಗಂದೂರು ದೇವಸ್ಥಾನ ಕೇವಲ ಈಡಿಗ ಸಮುದಾಯಕ್ಕೆ ಸೇರಿದ ದೇವಸ್ಥಾನದಲ್ಲಿ ಎಲ್ಲಾ ಸಮುದಾಯಕ್ಕೆ ಸೇರಿದ ದೇವಸ್ಥಾನ. ಈ ದೇವಸ್ಥಾನವನ್ನು ಧರ್ಮದರ್ಶಿ ರಾಮಪ್ಪನವರ ಆಡಳಿತದಲ್ಲೇ ನಡೆಯುವಂತಾಗಬೇಕು. ಅರ್ಚಕ ಶೇಷಗಿರಿ ಭಟ್ ಅವರ ತಪ್ಪುಗಳಿಗೆ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ.

ದೇವಸ್ಥಾನದಲ್ಲಿ ಭಕ್ತರ ಮೇಲೆ ಹಲ್ಲೆ ನಡೆಸಿದ್ದರ ಬಗ್ಗೆ ಕ್ರಮ ಕೈಗೊಳ್ಳಬೇಕು, ಇಲ್ಲವೇ ಎಚ್ಚರಿಕೆ ನೀಡಬೇಕು. ಸರ್ಕಾರ ಮುಜುರಾಯಿಗೆ ತೆಗೆದುಕೊಳ್ಳವ ಪ್ರಯತ್ನ ಮುಂದುವರೆಸಿದರೇ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಈಡಿಗ ಸಮುದಾಯದ ಮುಖಂಡರು ಎಚ್ಚರಿಕೆಯನ್ನು ನೀಡಿದ್ದಾರೆ.

ಒಟ್ಟಿನಲ್ಲಿ ಸಿಗಂದೂರು ಚೌಡೇಶ್ವರಿಯ ಸನ್ನಿಧಿಯಲ್ಲಿ ಹುಟ್ಟಿಕೊಂಡಿರುವ ಪಟ್ಟದ ವಿವಾದ ಸದ್ಯಕ್ಕೆ ಬಗೆಹರಿಯುವ ಲಕ್ಷಣ ಗೋಚರಿಸುತ್ತಿಲ್ಲ. ಒಂದೆಡೆ ರಾಜ್ಯ ಸರಕಾರ ದೇವಸ್ಥಾನಕ್ಕೆ ಬರುವ ಆದಾಯದ ಹಿನ್ನೆಲೆಯಲ್ಲಿಯೇ ಮುಜರಾಯಿ ವ್ಯಾಪ್ತಿ ಸೇರ್ಪಡೆಗೊಳಿಸುವ ಚಿಂತನೆಯಲ್ಲಿದ್ರೆ, ಈಡಿಗ ಸಮುದಾಯದವರು ಮಾತ್ರ ಯಾವುದೇ ಕಾರಣಕ್ಕೂ ತಾವು ದೇವಸ್ಥಾನವನ್ನು ಬಿಟ್ಟುಕೊಡುವುದಿಲ್ಲ ಅಂತಾ ಪಟ್ಟು ಹಿಡಿದಿದ್ದಾರೆ. ಆದರೆ ಅರ್ಚಕ ಶೇಷಗಿರಿ ಭಟ್ ಹಾಗೂ ಧರ್ಮದರ್ಶಿ ರಾಮಪ್ಪ ನಡುವಿನ ಸಂಘರ್ಷ ಮುಗಿಯದ ಹೊರತು ವಿವಾದ ಬಗೆಹರಿಯುವುದು ಅನುಮಾನ.