ಹಾಸನ : ಕೊರೊನಾ ನಡುವಲ್ಲೇ ರಾಜ್ಯ ಸರಕಾರ ಎಸ್ಎಸ್ಎಲ್ ಸಿ ಪರೀಕ್ಷೆ ನಡೆಸುತ್ತಿದೆ. ಆದರೆ ಎಸ್ಎಸ್ಎಲ್ ಸಿ ಪರೀಕ್ಷೆಗೆ ಬರೆದಿರುವ ವಿದ್ಯಾರ್ಥಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಆತಂಕ ಎದುರಾಗಿದೆ.

ಹಾಸನ ಜಿಲ್ಲೆಯ ಅರಕಲಗೋಡಿನ ಮಲ್ಲಿಪಟ್ಟಣ ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿ ಜೂನ್ 25ರಂದು ಆರಂಭವಾದ ಎಸ್ಎಸ್ಎಲ್ ಸಿ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿ ದ್ವಿತೀಯ ಭಾಷೆ ಪರೀಕ್ಷೆಯನ್ನು ಬರೆದಿದ್ದ. ಅಲ್ಲದೇ ಇಂದು ನಡೆದ ಗಣಿತ ಪರೀಕ್ಷೆಯನ್ನೂ ಬರೆದಿದ್ದಾರೆ. ಆದರೆ ಪರೀಕ್ಷೆ ಬರೆಯುತ್ತಿದ್ದ ವೇಳೆಯಲ್ಲಿಯೇ ವಿದ್ಯಾರ್ಥಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಪತ್ತೆಯಾಗುತ್ತಿದ್ದಂತೆಯೇ ಪರೀಕ್ಷಾ ಕೇಂದ್ರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಹಲವು ದಿನಗಳಿಂದಲೂ ವಿದ್ಯಾರ್ಥಿಗೆ ಅನಾರೋಗ್ಯದ ಸಮಸ್ಯೆಯಿತ್ತು. ಈ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ ಗಂಟಲು ದ್ರವವನ್ನು ಸಂಗ್ರಹಿಸಲಾಗಿತ್ತು. ಆದ್ರಿಂದು ಕೊರೊನಾ ತಪಾಸಣಾ ವರದಿ ಬಂದಿದ್ದು, ವಿದ್ಯಾರ್ಥಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ವಿದ್ಯಾರ್ಥಿ ಪರೀಕ್ಷೆಯನ್ನು ಬರೆದ ನಂತರ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಆತನ ಸಂಪರ್ಕದಲ್ಲಿ ಇದ್ದವರನ್ನೂ ಕೂಡ ಕ್ವಾರಂಟೈನ್ ಗೆ ಒಳಪಡಿಸುವ ಸಾಧ್ಯತೆಯಿದೆ.

ಶಾಲೆಗೆ ಆರೋಗ್ಯಾಧಿಕಾರಿಗಳು ಹಾಗೂ ಸಿಬ್ಬಂಧಿಗಳು ಭೇಟಿ ನೀಡಿದ್ದಾರೆ. ಎರಡು ಪರೀಕ್ಷೆಗಳಿಗೆ ಹಾಜರಾಗಿದ್ದ ವಿದ್ಯಾರ್ಥಿಗೆ ಕೊರೊನಾ ಸೋಂಕು ಪತ್ತೆಯಾಗಿರುವುದು ಇದೀಗ ಅರಕಲಗೋಡು ತಾಲೂಕಿನಾದ್ಯಂತ ಆತಂಕಕ್ಕೆ ಕಾರಣವಾಗಿದೆ. ಶಾಲೆಯನ್ನು ಸಂಪೂರ್ಣವಾಗ ಸ್ಯಾನಿಟೈಸ್ ಮಾಡುವುದರ ಜೊತೆಗೆ ಪರೀಕ್ಷಾ ಕೇಂದ್ರವನ್ನೇ ಬೇರೆಡೆಗೆ ವರ್ಗಾಯಿಸುವ ಸಾಧ್ಯತೆಯಿದೆ.