ಅಚ್ಚರಿ ಹಾಗೂ ಶಾಕಿಂಗ್ ಬೆಳವಣಿಗೆಯೊಂದರಲ್ಲಿ ತಮಿಳುನಾಡಿನ ರಾಜಕೀಯ ಚಿತ್ರಣ ಬದಲಾಯಿಸುತ್ತಾರೆ ಎಂದು ಉಹಿಸಲಾಗಿದ್ದ ಚಿನ್ನಮ್ಮ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಚುನಾವಣೆಗೆ ಎರಡು ತಿಂಗಳಿರುವಾಗ ನಡೆದ ಈ ಬೆಳವಣಿಗೆ ಹಲವು ಪ್ರಶ್ನೆ ಹುಟ್ಟಿಸಿದೆ.

ಚಿನ್ನಮ್ಮ ಅಲಿಯಾಸ್ ಶಶಿಕಲಾ ತಮಿಳುನಾಡಿನ ತಲೈವಿ ಮಾಜಿ ಸಿಎಂ ಜಯಲಲಿತಾ ಪರಮಾಪ್ತೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆ ಮುಗಿಸಿ ಬಿಡುಗಡೆಗೊಂಡ ಶಶಿಕಲಾ ತಮಿಳುನಾಡಿನ ಚುನಾವಣೆಯ ದಿಕ್ಕುದೆಸೆ ಬದಲಾಯಿಸುವ ನೀರಿಕ್ಷೆ ಇತ್ತು.ಆದರೆ ಕರ್ನಾಟಕದಿಂದ ಸಂಭ್ರಮದ ಮೆರವಣಿಗೆಯಲ್ಲಿ ತಮಿಳುನಾಡು ತಲುಪಿದ ಶಶಿಕಲಾ ಅಚ್ಚರಿ ನಿರ್ಧಾರ ಘೋಷಿಸಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

ಸಕ್ರಿಯ ರಾಜಕಾರಣದಿಂದ ನಿವೃತ್ತಿ ಪಡೆಯುತ್ತಿರುವುದಾಗಿ ತಮ್ಮ ಪತ್ರದಲ್ಲಿ ಪ್ರಕಟಿಸಿರುವ ಶಶಿಕಲಾ, ಎಐಡಿಎಂಕೆ ಪಕ್ಷವನ್ನು ಸೋಲಿಸುವಂತೆ ಡಿಎಂಕೆಗೆ ಸೂಚಿಸಿದ್ದಾರೆ.

ಅಲ್ಲದೇ ಮತ್ತೊಮ್ಮೆ ತಮಿಳುನಾಡಿನಲ್ಲಿ ಅಮ್ಮನ ಸುವರ್ಣ ಆಡಳಿತಕ್ಕಾಗಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ. ಅಲ್ಲದೇ ನಾನು ಯಾವಾಗಲೂ ಅಧಿಕಾರಕ್ಕೆ ಆಸೆ ಪಟ್ಟಿಲ್ಲ ಎಂದ ಶಶಿಕಲಾ, ಜಯಲಲಿತಾ ಬದುಕಿದ್ದಾಗಲೂ ನಾನು ಅಧಿಕಾರಕ್ಕೆ ಆಸೆ ಪಡಲಿಲ್ಲ. ಈಗಲೂ ಆಸೆ ಪಡುವುದಿಲ್ಲ. ನಾನು ರಾಜಕೀಯ ತೊರೆಯುತ್ತಿದ್ದೇನೆ. ರಾಜಕೀಯದಲ್ಲಿ ನಮ್ಮ ಪಕ್ಷ ಗೆಲ್ಲಲಿ ಎಂದಷ್ಟೇ ನಾನು ಆಸೆ ಪಡುತ್ತೇನೆ ಎಂದಿದ್ದಾರೆ.

ಎಐಡಿಎಂಕೆ ಹಾಗೂ ಬಿಜೆಪಿ ಮೈತ್ರಿ ಘೋಷಿಸಿದ್ದು ಒಂದೊಮ್ಮೆ ಶಶಿಕಲಾ ರಾಜಕೀಯ ಕಣಕ್ಕಿಳಿದರೇ ಅಕ್ರಮ ಆಸ್ತಿ ಗಳಿಕೆಯ ಜೈಲುವಾಸವನ್ನೇ ವಿಪಕ್ಷಗಳು ಟಾರ್ಗೆಟ್ ಮಾಡಿಕೊಂಡು ಅಪ್ರಪ್ರಚಾರ ಮಾಡುವ ಸಾಧ್ಯತೆ ಇದೆ. ಹೀಗಾಗಿ ಪಕ್ಷದ ಹಿತ ದೃಷ್ಟಿಯಿಂದ ಶಶಿಕಲಾ ರಾಜಕೀಯದಿಂದ ದೂರ ಉಳಿಯುವ ನಿರ್ಣಯಕೈಗೊಂಡಿದ್ದಾರೆ ಎನ್ನಲಾಗಿದೆ.ಎಪ್ರಿಲ್ ನಲ್ಲಿ ತಮಿಳುನಾಡಿನ ಚುನಾವಣೆ ನಡೆಯಲಿದ್ದು ಬಿಜೆಪಿ ಸಾಕಷ್ಟು ಬಲಗೊಂಡಿದ್ದು ಜಿದ್ದಾಜಿದ್ದಿನ ಹೋರಾಟದ ನೀರಿಕ್ಷೆ ಇದೆ.