ಉಡುಪಿ : ಮುಂಬೈನಿಂದ ವಾಪಾಸಾದವರಲ್ಲಿಯೇ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಮುಂಬೈನಿಂದ 8,500 ಮಂದಿ ಆಗಮಿಸಿದ್ದು, ಈ ಪೈಕಿ ಬಹುತೇಕರ ಸ್ಯಾಂಪಲ್ ಪರೀಕ್ಷೆ ಈಗಾಗಲೇ ಮುಕ್ತಾಯಗೊಂಡಿದೆ. ಎಲ್ಲರ ಕೊರೊನಾ ಸ್ಯಾಂಪಲ್ ಪರೀಕ್ಷೆ ಇಂದು ಮುಕ್ತಾಯಗೊಳ್ಳಲಿದೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗಲಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.

ಉಡುಪಿ ಜಿಲ್ಲೆಯ ರಾಜ್ಯದಲ್ಲಿಯೇ ಅತೀ ಹೆಚ್ಚು ಸಂಖ್ಯೆಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇಂದು ಒಂದೇ ದಿನ ಜಿಲ್ಲೆಯಲ್ಲಿ ಬರೋಬ್ಬರಿ 204 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿಂದು 2,000ಕ್ಕೂ ಅಧಿಕ ಮಂದಿಯ ತಪಾಸಣೆಯನ್ನು ನಡೆಸಲಾಗಿತ್ತು. ಇದರಲ್ಲಿ 157 ಮಂದಿ ಪುರುಷರು, 40 ಮಂದಿ ಮಹಿಳೆಯರು ಹಾಗೂ 7 ಮಕ್ಕಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಕೊರೊನಾ ಪೀಡಿತರ ಪೈಕಿ 203 ಮಂದಿ ಮುಂಬೈನಿಂದ ವಾಪಾಸಾದವರೇ ಆಗಿದ್ದು, ಚೆಕ್ ಪೋಸ್ಟ್ ಡ್ಯೂಟಿ ಮಾಡುತ್ತಿದ್ದ ಓರ್ವ ಪೊಲೀಸ್ ಸಿಬ್ಬಂಧಿಗೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಎಲ್ಲಾ ಸೋಂಕಿತರನ್ನು ಈಗಾಗಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ.

ಮುಂಬೈನಿಂದ 8,500 ಮಂದಿ ಜಿಲ್ಲೆಗೆ ಆಗಮಿಸಿದ್ದರು. ಈ ಪೈಕಿ ಈಗಾಗಲೇ ಬಹುತೇಕರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಲಾಗಿದ್ದು, ಪರೀಕ್ಷೆಯನ್ನು ನಡೆಸಲಾಗಿದೆ. ಆದ್ರೀಗ ಉಳಿದವರ ತಪಾಸಣೆಯೂ ಮುಕ್ತಾಯಗೊಳ್ಳಲಿದೆ ಎಂದಿದ್ದಾರೆ.