ಉಡುಪಿ : ಕೊರೊನಾ ಸೋಂಕು ಕರಾವಳಿಯಲ್ಲಿ ವ್ಯಾಪಿಸುತ್ತಿರೋ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಗಡಿಗಳನ್ನು ಸಂಪೂರ್ಣವಾಗಿ ಸೀಲ್ ಮಾಡಲಾಗಿದೆ. ಯಾರಿಗೂ ಕೂಡ ಜಿಲ್ಲೆಯೊಳಗೆ ಪ್ರವೇಶಿಸಲು ಅವಕಾಶವಿಲ್ಲ. ಅಷ್ಟೇ ಅಲ್ಲಾ ಯಾರಿಗೂ ಹೊರ ಜಿಲ್ಲೆಗಳಿಗೆ ಹೋಗಲು ಅವಕಾಶವಿಲ್ಲಾ ಎಂದು ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಅವರು ಹೇಳಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಮೂರು ಮಂದಿ ಕೊರೊನಾ ಸೋಂಕಿತರಿದ್ದು, ಮೂವರು ಕೂಡ ಗುಣಮುಖರಾಗಿದ್ದಾರೆ. ಕೊರೊನಾ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನೂ ಕೊರೊನಾ ತಪಾಸಣೆ ನಡೆಸಲಾಗಿದ್ದು, ವರದಿಯಲ್ಲಿ ನೆಗೆಟಿವ್ ಎಂದು ಬಂದಿದೆ.

ಅಲ್ಲದೇ ಕೊರೊನಾ ಸೋಂಕಿತ ಮೂವರನ್ನೂ ಶೀಘ್ರದಲ್ಲಿಯೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುವುದು ಎಂದಿದ್ದಾರೆ.

ಉಡುಪಿ ಜಿಲ್ಲೆಯ ಒಳಗಿನಿಂದ ಕೊರೊನಾ ಸೋಂಕು ಹರಡುವ ಸಾಧ್ಯತೆ ತೀರಾ ಕಡಿಮೆಯಿದೆ. ಆದರೆ ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಜನರು ಉಡುಪಿ ಜಿಲ್ಲೆಗೊಳಗೆ ಪ್ರವೇಶಿಸೋ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಉಡುಪಿ – ಶಿವಮೊಗ್ಗ, ಉಡುಪಿ – ಉತ್ತರ ಕನ್ನಡ, ಉಡುಪಿ – ದಕ್ಷಿಣ ಕನ್ನಡ, ಉಡುಪಿ – ಚಿಕ್ಕಮಗಳೂರು ಸೇರಿದಂತೆ ಉಡುಪಿ ಜಿಲ್ಲೆಯ ಎಲ್ಲಾ ಗಡಿಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.

ಯಾರಾದ್ರೂ ಜಿಲ್ಲೆಗೆ ಬರುವ ಯೋಚನೆಯಲ್ಲಿದ್ದರೆ, ಸದ್ಯಕ್ಕೆ ಯಾರೂ ಜಿಲ್ಲೆಗೆ ಬರುವುದು ಬೇಡ. ಹಾಗೆ ಹೊರ ಜಿಲ್ಲೆಗಳಿಗೆ ಹೋಗಲು ಕೂಡ ಯಾರಿಗೂ ಅವಕಾಶವಿಲ್ಲ ಎಂದಿದ್ದಾರೆ.