ರಾಜಕೀಯದ ಹೆಸರಿನಲ್ಲಿ ಗೂಂಡಾಗಿರಿ ಉತ್ತರ ಪ್ರದೇಶದಲ್ಲಿ ಹೊಸತಲ್ಲ. ಈ ಭಾರಿ ಮಾತ್ರ ನಾಗರೀಕ ಸಮಾಜ ತಲೆತಗ್ಗಿಸುವಂತ ಘಟನೆಗೆ ಉತ್ತರ ಪ್ರದೇಶ ಸಾಕ್ಷಿಯಾಗಿದೆ. ಸ್ಥಳೀಯ ಸಂಸ್ಥೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಬಂದಿದ್ದ ಮಹಿಳಾ ಅಭ್ಯರ್ಥಿಯ ಸೀರೆ ಎಳೆದು ವಿಕೃತಿ ಮೆರೆಯಲಾಗಿದ್ದು, ಘಟನೆ ದೇಶದ ಗಮನ ಸೆಳೆದಿದೆ.

ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಅಭಿಮಾನಿ ಕಾರ್ಯಕರ್ತರೇ ಈ ಕೃತ್ಯ ಎಸಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದು, ಮಹಿಳೆಯ ಮೇಲೆ ಕೈಮಾಡಿದ ಕಾರ್ಯಕರ್ತರು ಬಳಿಕ ಆಕೆಯ ಸೀರೆ ಎಳೆದು ಅವಮಾನ ಮಾಡಿದ್ದಾರೆ.

ಉತ್ತರ ಪ್ರದೇಶದ ಲಕ್ನೋದಿಂದ 130 ಕಿಲೋಮೀಟರ್ ದೂರದಲ್ಲಿರುವ ಲಿಂಖಿಪರ್ ನಲ್ಲಿ ಘಟನೆ ನಡೆದಿದ್ದು, ಈ ಘಟನೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಈ ಹಿಂಸಾಚಾರದ ವಿಡಿಯೋ ಹಂಚಿಕೊಂಡಿದ್ದು, ಮೋದಿ ಹಾಗೂ ಸಿಎಂ ಯೋಗಿ ಆದಿತ್ಯನಾಥರನ್ನು ಟೀಕಿಸಿದ್ದಾರೆ.

ಬ್ಲಾಕ್ ಪಂಚಾಯ್ತಿ ಚುನಾವಣೆಗೆ ನಾಮಪತ್ರ ಸಲ್ಲಿಸುವ ಉದ್ದೇಶದಿಂದ ಮಹಿಳೆ ತೆರಳುತ್ತಿದ್ದಳು ಎನ್ನಲಾಗಿದ್ದು, ಈ ವೇಳೆ ಸಮಾಜವಾದಿ ಪಕ್ಷದ ಕಾರ್ಯಕರ್ತರು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಉತ್ತರ ಪ್ರದೇಶದ 825 ಬ್ಲಾಕ್ ಪಂಚಾಯ್ತಿಗೆ ಶನಿವಾರ ಮತದಾನ ನಡೆಯಲಿದ್ದು, ಈಗಾಗಲೇ ಉತ್ತರ ಪ್ರದೇಶದ 14 ಪ್ರದೇಶಗಳಿಂದ ಹಿಂಸಾಚಾರದ ಘಟನೆಗಳು ವರದಿಯಾಗಿದೆ. ಸಮಾಜವಾದಿ ಪಕ್ಷದ ವಿರುದ್ಧ ಆರೋಪ ಕೇಳಿಬರುತ್ತಿದ್ದರೂ ಅಖಿಲೇಶ್ ಯಾದವ್ ಕೂಡ ವಿಡಿಯೋ ಹಂಚಿಕೊಂಡಿದ್ದು, ಯೋಗಿ ಆದಿತ್ಯನಾಥರತ್ತ ಬೊಟ್ಟು ತೋರಿದ್ದಾರೆ.