ಮಂಗಳೂರು : ಕೊರೊನಾ ಭೀತಿಯಿಂದಾಗಿ ದೇಶದಾದ್ಯಂತ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ. ಜನರ ಮನೆಯಿಂದ ಹೊರಬರಲಾರದ ಸ್ಥಿತಿಯಿದೆ. ಕೊರೊನಾ ಭೀತಿಯ ನಡುವಲ್ಲೇ ಹಲವರಿಗೆ ಆರೋಗ್ಯ ಸಮಸ್ಯೆ ಎದುರಾಗುತ್ತಿದೆ. ಇಂತಹ ಜನರಿಗೆ ವಾಟ್ಸಾಪ್ ಮೂಲಕವೇ ಇಲ್ಲೊಂದು ಆಸ್ಪತ್ರೆಗೆ ಆರೋಗ್ಯ ಸೇವೆ ನೀಡಲು ಮುಂದಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಸದ್ಯ ಜಿಲ್ಲೆಯಲ್ಲಿ 7 ಮಂದಿ ಕೊರೊನಾ ಸೋಂಕಿನ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ.

ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗೆ ಜನ ಆಸ್ಪತ್ರೆಗೆ ಬರೋದ್ರಿಂದ ಕೊರೊನಾ ಸೋಂಕು ಹರಡುವ ಭೀತಿಯೂ ಇದೆ. ಈ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳು ಓಪಿಡಿ ಸೌಲಭ್ಯವನ್ನು ಬಂದ್ ಮಾಡಿವೆ. ಇದರಿಂದಾಗಿ ಜನರು ಇತರೇ ಆರೋಗ್ಯ ಸಮಸ್ಯೆಯಿಂದ ತತ್ತರಿಸಿದ್ದಾರೆ. ಇಂತಹ ಜನರ ಅನುಕೂಲಕ್ಕಾಗಿಯೇ ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆ ರಾಜ್ಯದಲ್ಲಿಯೇ ಮೊದಲ ಬಾರಿಗೆ ವಿನೂತನ ರೀತಿಯಲ್ಲಿ ಜನ ಸೇವೆ ಮುಂದಾಗಿದೆ.

ಕೆ.ಎಸ್.ಹೆಗ್ಡೆ ಆಸ್ಪತ್ರೆ ಈಗಾಗಲೇ ಆನ್ ಲೈನ್ ಮೂಲಕ ವಿನೂತನ ಆರೋಗ್ಯ ಸೇವೆಯನ್ನು ಒದಗಿಸಲು ಮುಂದಾಗಿದೆ. ಆಸ್ಪತ್ರೆಯಲ್ಲಿ ಲಭ್ಯವಿರುವ ಎಲ್ಲಾ ವಿಭಾಗದ ವೈದ್ಯರ ವಾಟ್ಸಾಪ್ ಸಂಖ್ಯೆಗಳನ್ನು ಜನರಿಗೆ ನೀಡಿದೆ.

ಯಾರಿಗೆ ಆರೋಗ್ಯ ಸಮಸ್ಯೆಯಿದೆಯೋ ಅವರು ತಮ್ಮ ವೈಯಕ್ತಿಕ ಮಾಹಿತಿ, ಹೆಸರು, ವಯಸ್ಸು, ತೂಕ, ಲಿಂಗ ಹಾಗೂ ಖಾಯಿಲೆಯ ಕುರಿತು ಮಾಹಿತಿಯನ್ನು ನೀಡಬೇಕು.

ಈ ಹಿಂದೆ ವೈದ್ಯರನ್ನು ಭೇಟಿ ಮಾಡಿದ ಚೀಟಿಯಿದ್ದರೂ ಅದನ್ನೂ ವೈದ್ಯರಿಗೆ ಒದಗಿಸಬೇಕು. ಜನರು ತಮ್ಮ ಸಮಸ್ಯೆಯನ್ನು ತಿಳಿಸಿದ ಕೆಲವೇ ನಿಮಿಷದಲ್ಲಿ ವೈದ್ಯರು ನೋಂದಣಿ ಸಂಖ್ಯೆಯಿರುವ ಚೀಟಿಯಲ್ಲಿ ಯಾವ ಔಷಧವನ್ನು ತೆಗೆದುಕೊಳ್ಳಬೇಕು ಅನ್ನೋ ಕುರಿತು ಮಾಹಿತಿಯನ್ನು ವಾಟ್ಸಾಪ್ ಗೆ ಕಳುಹಿಸುತ್ತಾರೆ.


ವೈದ್ಯರು ಕಳುಹಿಸುವ ಔಷಧಿಯನ್ನು ಸಮೀಪದ ಮೆಡಿಕಲ್ಸ್ ಗಳಿಂದ ಪಡೆಯಬಹುದಾಗಿದೆ. ರಾಜ್ಯದಲ್ಲಿಯೇ ಮೊದಲ ಬಾರಿಗೆ ಕೆ.ಎಸ್.ಹೆಗ್ಡೆ ಆಸ್ಪತ್ರೆ ವಾಟ್ಸಾಪ್ ಮೂಲಕ ಆರೋಗ್ಯ ಸೇವೆ ಒದಗಿಸುತ್ತಿರುವುದರಿಂದ ಜನರ ಆತಂಕ ದೂರವಾಗಿದೆ. ಆಸ್ಪತ್ರೆಯ ವಿನೂತಕ ಕಾರ್ಯಕ್ಕೆ ಕರಾವಳಿಗರು ಕೂಡ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.