ನವದೆಹಲಿ : ದಿನೇ ದಿನೇ ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ಆರ್ಭಟ ಹೆಚ್ಚುತ್ತಿದೆ. ಜನಸಾಮಾನ್ಯರು, ಉದ್ಯಮಿಗಳು, ಉದ್ಯೋಗಿಗಳು, ವ್ಯಾಪಾರಿಗಳು ತತ್ತರಿಸಿ ಹೋಗಿದ್ದಾರೆ. ಈ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೆ ಮೂರು ತಿಂಗಳ ಕಾಲ ಸಾಲಗಾರರಿಗೆ ರಿಲೀಫ್ ನೀಡಲು ಚಿಂತನೆ ನಡೆಸುತ್ತಿದೆ.
ಕೊರೊನಾ ವೈರಸ್ ಸೋಂಕು ದೇಶದಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆಯೇ ದೇಶದಾದ್ಯಂತ ಸುಮಾರು 40 ದಿನಗಳ ಕಾಲ ಲಾಕ್ ಡೌನ್ ಆದೇಶ ಜಾರಿ ಮಾಡಲಾಗಿತ್ತು. ಇದರ ಬೆನ್ನಲ್ಲೇ ಭಾರತೀಯ ರಿಸರ್ವ್ ಬ್ಯಾಂಕ್ ಜನರಿಗೆ ಸಾಲದ ಮೇಲಿನ ಹೊರೆಯನ್ನು ತಗ್ಗಿಸಿತ್ತು. ಪ್ರಮುಖವಾಗಿ ಮನೆ, ವಾಹನ, ವ್ಯವಹಾರ ಸೇರಿದಂತೆ ಎಲ್ಲಾ ಬಗೆಯ ಸಾಲಗಳ ಮೇಲಿನ ಇಎಂಐ ವಿನಾಯಿತಿಯನ್ನು ನೀಡಿತ್ತು. ಆರಂಭದಲ್ಲಿ ಮೂರು ತಿಂಗಳ ವಿನಾಯಿತಿ ನೀಡಿದ್ದ ಆರ್ ಬಿಐ ನಂತರದಲ್ಲಿ 6 ತಿಂಗಳಿಗೆ ವಿಸ್ತರಣೆಯನ್ನು ಮಾಡಿದೆ.


ಅಲ್ಲದೇ ಕೇಂದ್ರ ಸರಕಾರ ದೇಶದಲ್ಲಿ ಆರ್ಥಿಕ ಪುನಶ್ಚೇತನಕ್ಕೆ ಸುಮಾರು 21 ಲಕ್ಷ ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ ಘೋಷಣೆಯನ್ನು ಮಾಡಿತ್ತು. ಆದ್ರೀಗ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಆರ್ ಬಿಐ ನೀಡಿದ್ದ ವಿನಾಯಿತಿ ಅಗಸ್ಟ್ 31ಕ್ಕೆ ಅಂತ್ಯಗೊಳ್ಳಲಿದೆ. ಆದರೆ ದೇಶದಲ್ಲಿ ಕೊರೊನಾ ಹೆಮ್ಮಾರಿಯ ಆರ್ಭಟ ಹೆಚ್ಚುತ್ತಲೇ ಇದೆ. ಹೀಗಾಗಿ ಆರ್ ಬಿಐ ಮತ್ತೆ ಮೂರು ತಿಂಗಳ ಕಾಲ ಕೆಲವೊಂದು ವಲಯಗಳಿಗೆ ಸಾಲದ ಮೇಲೆ ವಿನಾಯಿತಿ ನೀಡಲು ಚಿಂತನೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ.

ಈಗಾಗಲೇ ಲಾಕ್ ಡೌನ್ ಆದೇಶವನ್ನು ತೆರವು ಮಾಡಿದ್ದರೂ ಕೂಡ ಕೊರೊನಾ ವೈರಸ್ ಸೋಂಕಿನಿಂದಾಗಿ ಅಂತರಾಷ್ಟ್ರೀಯ ವಿಮಾನ ಸೇವೆ ಆರಂಭವಾಗುವುದು ಸದ್ಯಕ್ಕಂತೂ ಅಸಾಧ್ಯ. ದೇಶೀಯ ವಿಮಾನ ಸೇವೆ ಆರಂಭಗೊಂಡಿದ್ದರೂ ಪ್ರಯಾಣಿಕರ ಕೊರತೆಯನ್ನು ವಿಮಾನಯಾನ ಕಂಪೆನಿಗಳು ಎದುರಿಸುತ್ತಿವೆ. ಕೈಗಾರಿಕೆಗಳು, ಕಾರ್ಖಾನೆಗಳು ಆರಂಭಗೊಂಡಿದ್ದರು ನಿರೀಕ್ಷಿತ ಪ್ರಮಾಣದಲ್ಲಿ ಉತ್ಪಾದನೆಯನ್ನು ಮಾಡುತ್ತಿಲ್ಲ.

ಜೊತೆಗೆ ಬಹುತೇಕ ಸೇವಾ ವಲಯದ ಉದ್ಯಮಗಳಲ್ಲಿ ಲಕ್ಷಾಂತರ ಮಂದಿ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಜನಸಾಮಾನ್ಯರು ಹಣಕಾಸಿನ ತೀವ್ರ ಕೊರತೆಯನ್ನು ಎದುರಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಬ್ಯಾಂಕುಗಳಿಗೆ ಸಾಲ ಮರುಪಾವತಿಯನ್ನು ಮಾಡುವುದು ಕಷ್ಟಸಾಧ್ಯ.

ಈ ಹಿನ್ನೆಲೆಯಲ್ಲಿಯೇ ಭಾರತೀಯ ರಿಸರ್ವ್ ಬ್ಯಾಂಕ್ ಸಾಲಗಾರರ ಹಿತದೃಷ್ಟಿಯಿಂದ ಕೆಲವೊಂದು ಸಾಲದ ಮೇಲಿನ ಇಎಂಐ ಪಾವತಿಗೆ ನವೆಂಬರ್ ಅಂತ್ಯದ ವರೆಗೂ ವಿನಾಯಿತಿಯನ್ನು ನೀಡುವುದು ಬಹುತೇಕ ಖಚಿತ. ಆರ್ ಬಿಐ ಗವರ್ನರ್ ಯಾವೆಲ್ಲಾ ವಲಯಗಳಿಗೆ ವಿನಾತಿಯನ್ನು ನೀಡಬೇಕು ಅನ್ನುವ ಕುರಿತು ಮಾತುಕತೆ ನಡೆಸುತ್ತಿದ್ದಾರೆ. ಸದ್ಯದಲ್ಲಿಯೇ ಈ ಕುರಿತು ಆರ್ ಬಿಐ ಅಧಿಕೃತವಾಗಿ ಘೋಷಣೆಯನ್ನು ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.