
ನವದೆಹಲಿ : ಇತ್ತೀಚಿನ ದಿನಗಳಲ್ಲಿ ಬಹುತೇಕ ಮಂದಿ ಚಿನ್ನಾಭರಣಗಳ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಆದರೆ, ಇನ್ಮುಂದೆ ಚಿನ್ನದ ಮೇಲೆ ಹೂಡಿಕೆ ಮಾಡುವ ಮುನ್ನ ಎಚ್ಚರವಾಗಿರೋದು ಒಳಿತು ಯಾಕೆಂದ್ರೆ, 1 ಲಕ್ಷ ಮೌಲ್ಯದ ಚಿನ್ನಾಭರಣ ಖರೀದಿ ಮಾಡುವವರ ಮೇಲೆ ನಿಗಾ ಇಡಲು ಆದಾಯ ತೆರಿಗೆ ಇಲಾಖೆ ಮುಂದಾಗಿದೆ.

ಒಂದು ಲಕ್ಷ ರೂಪಾಯಿ ಮತ್ತು ಅದಕ್ಕೂ ಹೆಚ್ಚಿನ ಬೆಲೆಯ ಆಭರಣಗಳು, ಸರಕುಗಳು ಮತ್ತು ವರ್ಣಚಿತ್ರಗಳು, ಶಿಕ್ಷಣ ಶುಲ್ಕ ಪಾವತಿ ಮತ್ತು ದೇಣಿಗೆ, ದೇಶೀಯ ವಿಮಾನದಲ್ಲಿ ಬಿಜಿನೆಸ್ ದರ್ಜೆಯಲ್ಲಿ ಪಯಣ ಮತ್ತು 20,000 ರೂಪಾಯಿ ಅಥವಾ ಅದಕ್ಕೂ ಹೆಚ್ಚಿನ ಹೋಟೆಲ್ ಬಿಲ್ ಪಾವತಿ ಮೇಲೆ ಆದಾಯ ತೆರಿಗೆ ಇಲಾಖೆಯ (ಐಟಿ) ನಿಗಾ ಇರಿಸಲಿದೆ.

ಆದಾಯ ತೆರಿಗೆ ಇಲಾಖೆ ಇನ್ನೂ ಹೆಚ್ಚಿನ ವಹಿವಾಟುಗಳನ್ನು ತನ್ನ ಪರಿಶೀಲನಾ ಚೌಕಟ್ಟಿನೊಳಗೆ ಸೇರಿಸಲು ಚಿಂತನೆ ನಡೆಸಿದ್ದು, ಹಣಕಾಸು ಸಂಸ್ಥೆ ಮತ್ತು ಇತರ ಸಂಸ್ಥೆಗಳು ನಿಗದಿತ ಮಿತಿಗಿಂತ ಹೆಚ್ಚಿನ ವಹಿವಾಟುಗಳನ್ನು ನಡೆಸಿದಾಗ ಐಟಿಗೆ ವರದಿ ಸಲ್ಲಿಸಬೇಕಾಗಬಹುದು.

50,000 ರೂಪಾಯಿಗಿಂತ ಹೆಚ್ಚಿನ ಜೀವ ವಿಮೆ ಮತ್ತು ಆರೋಗ್ಯ ವಿಮೆ ಕಂತು ಪಾವತಿ, 20,000 ರೂಪಾಯಿಗಿಂತ ಹೆಚ್ಚಿನ ಆಸ್ತಿ ತೆರಿಗೆ ಪಾವತಿ, 1 ಲಕ್ಷ ರೂಪಾಯಿಗಿಂತ ಹೆಚ್ಚಿನ ವಿದ್ಯುತ್ ಬಳಕೆಯೂ ಐಟಿ ಸ್ಕ್ಯಾನರ್ ಅಡಿಯಲ್ಲಿ ಸೇರಿಸುವ ಸಂಭವವಿದೆ.

ದೊಡ್ಡ ಪ್ರಮಾಣದಲ್ಲಿ ಖರೀದಿಗಳನ್ನು ಮಾಡುತ್ತಿರುವ, ಆದರೆ ತೆರಿಗೆ ಪಾವತಿಸದ ಜನರನ್ನು ಗುರುತಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎನ್ನಲಾಗಿದೆ. ಆದಾಗ್ಯೂ ಇವೆಲ್ಲ ಪ್ರಸ್ತಾವಿತ ಕ್ರಮಗಳಾಗಿದ್ದು, ಅಂತಿಮ ಆದೇಶ ಬರುವವರೆಗೂ ಸ್ಪಷ್ಟತೆ ಇಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.