ಭಾನುವಾರ, ಏಪ್ರಿಲ್ 27, 2025
HomebusinessBitcoin : ಬಿಟ್‌ಕಾಯಿನ್‌ ಹೇಗಿರುತ್ತೆ? ಚಲಾವಣೆ - ವ್ಯವಹಾರ ಹೇಗೆ ಮಾಡುತ್ತಾರೆ ? ಈಗೇಕೆ ಹೆಚ್ಚು...

Bitcoin : ಬಿಟ್‌ಕಾಯಿನ್‌ ಹೇಗಿರುತ್ತೆ? ಚಲಾವಣೆ – ವ್ಯವಹಾರ ಹೇಗೆ ಮಾಡುತ್ತಾರೆ ? ಈಗೇಕೆ ಹೆಚ್ಚು ಚರ್ಚೆಯಾಗುತ್ತಿದೆ ಈ ಕ್ರಿಪ್ಟೋಕರೆನ್ಸಿ

- Advertisement -

ಕರ್ನಾಟಕ ರಾಜ್ಯದ ರಾಜಕೀಯದಲ್ಲಿ ಸದ್ಯ ಕೋಲಾಹಲವನ್ನೆಬ್ಬಿಸಿದೆ ಈ ಬಿಟ್‌ಕಾಯಿನ್ ( bitcoin). ಯೂರೋಪ್‌ನಲ್ಲಿ ಸುಮಾರು 2008ರಿಂದಲೇ ಆರಂಭವಾಯಿತ ಇದರ ವ್ಯವಹಾರ. ಅನಂತರ ದಿನೇದಿನೇ ಅಭಿವೃದ್ಧಿಗೊಂಡು ಇಂದು ಪ್ರತಿಶತ 80ಕ್ಕಿಂತಲೂ ಅಧಿಕ ಸಂಖ್ಯೆಯ ಜನರು ಇದರ ವ್ಯವಹಾರ ನಡೆಸುತ್ತಿದ್ದಾರೆ, ನೂರಾರು ಸಂಖ್ಯೆಯ ವಿನಿಮಯ ಕೇಂದ್ರಗಳು ಹಾಗೂ ವ್ಯವಹಾರ ಸಂಸ್ಥೆಗಳು ಇದರಲ್ಲಿ ಕಾರ್ಯ ನಿರತವಾಗಿವೆ. ಭಾರತೀಯರಿಗೆ ಮಾತ್ರ ಇದರ ಆಕರ್ಷಣೆ ಇತ್ತೀಚೆಗೆ ಹೆಚ್ಚುತ್ತಿದ್ದು ಹೆಚ್ಚಿನ ಸಂಖ್ಯೆಯ ಜನರಿಗೆ ಇದೆಲ್ಲಾ ಏನು ಎಂಬುದೇ ತಿಳಿಸಿಲ್ಲ. ಹಾಗಾದರೆ ಬಿಟ್ ಕಾಯಿನ್ ಎಂದರೇನು? ಇದರ ವಹಿವಾಟು ಹೇಗೆ ನಡೆಯುತ್ತದೆ ಎನ್ನುವುದನ್ನು ತಿಳಿಯೋಣ ಬನ್ನಿ.

ಕರ್ನಾಟಕದ ರಾಜಕೀಯ ರಂಗದಲ್ಲಿ ಬಿಟ್‌ಕಾಯಿನ್‌ ಎಬ್ಬಿಸಿರುವ ಬಿರುಗಾಳಿ ಎಂತಹದು ?

ರಾಜ್ಯದಲ್ಲಿ ಸಿದ್ಧರಾಮಯ್ಯ ಸರಕಾರ ಆಡಳಿತ ನಡೆಸುತ್ತಿದ್ದಾಗ ಶ್ರೀಕೃಷ್ಣ ಎನ್ನುವ ಒಬ್ಬ ಹ್ಯಾಕರ್‌ನನ್ನು ಬಂಧಿಸಿದ ನಂತರ ಈ ವಿಷಯ ಪ್ರಾಮಖ್ಯತೆ ಪಡೆಯಿತು. ಕ್ರಿಪ್ಟೋಕರೆನ್ಸಿ ( Cryptocurrency )ಸಂಸ್ಥೆಗಳ ಸರ್ವರ್‌ಗಳನ್ನೇ ಹ್ಯಾಕ್‌ ಮಾಡುತ್ತಿದ್ದ ಇವನು ಸುಮಾರು 21 ಬಿಟ್‌ಕಾಯಿನ್‌ಗಳನ್ನು ಅಕ್ರಮವಾಗಿ ಹೊಂದಿದ್ದಾನೆಂಬುದು ಬಹಿರಂಗಗೊಂಡಿತಲ್ಲದೇ ಇವನೊಂದಿಗೆ ರಾಜ್ಯದ ಕೆಲ ಪ್ರಮುಖ ರಾಜಕಾರಣಿಗಳ ಮಕ್ಕಳೂ ಭಾಗಿಯಾಗಿದ್ದಾರೆಂಬ ವಿಷಯ ಬಹಿರಂಗವಾಯಿತು. ಇದೇ ವಿಚಾರದಲ್ಲಿ ಕರ್ನಾಟಕದ ರಾಜಕಾರಣಿಗಳು ಪರಸ್ಪರ ಆರೋಪಗಳನ್ನು ಮಾಡಿಕೊಳ್ಳುತ್ತಿದ್ದು ಸಾರ್ವಜನಿಕರ ಗಮನ ಸೆಳೆದಿದೆ. ಕೇಂದ್ರ ತನಿಖಾ ಸಂಸ್ಥೆಗಳು ಇದರ ತನಿಖೆ ನಡೆಸುತ್ತಿದ್ದು ಸತ್ಯಾಸತ್ಯತೆ ಇನ್ನೂ ಹೊರಬರಬೇಕಿದೆ.

“ಕ್ರಿಪ್ಟೋ ಕರೆನ್ಸಿ” ಎಂದರೇನು ?

ಕರೆನ್ಸಿ ಎಂದರೇನೆಂಬುದು ನಮಗೆಲ್ಲಾ ತಿಳಿದಿದೆ. ಜನರು ದಿನ ನಿತ್ಯದ ಕೊಡು-ಕೊಳ್ಳುವ ವ್ಯವಹಾರಗಳನ್ನು ಮಾಡಲು ವಿನಿಮಯ ಮಾಡಿಕೊಳ್ಳುವ, ಸರಕಾರದಿಂದ ಅಧಿಕೃತವಾಗಿ ಮುದ್ರಣ ಮಾಡಲಾಗಿರುವ ನೋಟುಗಳು ಹಾಗೂ ನಾಣ್ಯಗಳನ್ನು ನಾವು ಕರೆನ್ಸಿ ಎನ್ನುತ್ತೇವೆ. ಹಾಗೆಯೇ, ಕ್ರಿಪ್ಟೋ ಕರೆನ್ಸಿ ಎನ್ನುವುದು ಒಂದು ಕಾಲ್ಪನಿಕ ಡಿಜಿಟಲ್‌ ಕರೆನ್ಸಿಯಾಗಿದ್ದು ಒಬ್ಬರಿಂದ ಒಬ್ಬರಿಗೆ ನೋಟು ಅಥವಾ ನಾಣ್ಯಗಳಂತೆ ಹಸ್ತಾಂತರ ಮಾಡಲು ಸಾಧ್ಯವಿಲ್ಲದ ಆದರೆ ಅತ್ಯಾಧುನಿಕ ಗಣಕಯಂತ್ರಗಳು ಹಾಗೂ ಮೊಬೈಲ್‌ ಫೋನ್‌ಗಳ ಮುಖಾಂತರ ಒಬ್ಬರು ಇನ್ನೊಬ್ಬರೊಂದಿಗೆ ವಿನಿಮಯ ಮಾಡಿಕೊಳ್ಳಲು ಸಾಧ್ಯವಿರುವ ಕರೆನ್ಸಿಯಾಗಿದೆ. ಇಂತಹ ಕ್ರಿಪ್ಟೋ ಕರೆನ್ಸಿಗಳು ನೂರಾರು ಸಂಖ್ಯೆಯಲ್ಲಿದ್ದು ಇವುಗಳಲ್ಲಿ ಬಿಟ್‌ ಕಾಯಿನ್‌ ಕೂಡಾ ಒಂದು. ಹಾಗಾದರೆ, ಇನ್ನಿತರ ಪ್ರಮುಖ ಕ್ರಿಪ್ಟೋಕರೆನ್ಸಿಗಳೆಂದರೆ ಬಿಟ್‌ಕಾಯಿನ್‌ ಕ್ಯಾ‍ಷ್, ಇಥೇರಿಯಮ್, ಲೈಟ್‌ ಕಾಯಿನ್, ಸ್ಟೆಲ್ಲಾರ್, ರಿಪಲ್‌, ಡೋಜ್‌ಕಾಯಿನ್‌, ಬಿಎಟಿ (ಬೇಸಿಕ್‌ ಅಟೆನ್ಷನ್ ಟೋಕನ್), ಕಾರ್ಡಾನೋ, ಬಿನಾನ್ಸ್, ಟ್ರಾನ್, ಮೊನೆರೋ, ಝಿ ಕ್ಯಾಷ್‌, ವೇವ್ಸ್‌ ಕಾಯಿನ್‌, ಹಾಗೂ ಹೊರೈಝನ್‌ ಮುಂತಾದವು. ಇವುಗಳು ಪ್ರಾಥಮಿಕ ಹಂತದಲ್ಲಿ ಬಂದ ಡಿಜಿಟಲ್ ಕರೆನ್ಸಿಗಳಾಗಿದ್ದು ಇತ್ತೀಚಿನ ದಿನಗಳಲ್ಲಿ ಡಿಫೈ (DEFI-ಡಿಸೆಂಟ್ರಲೈಸ್‌ಡ್‌ ಫೈನಾನ್ಸ್) ಕರೆನ್ಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಚಾಲ್ತಿಗೆ ಬರುತ್ತಿದ್ದು ಇವುಗಳ ವ್ಯವಹಾರವು ಸಂಪೂರ್ಣವಾಗಿ ತಂತ್ರಜ್ಞಾನ ಆಧಾರಿತವಾಗಿದ್ದು ಮಾನವ ನಿಯಂತ್ರಣ ಇರುವುದಿಲ್ಲವಾಗಿ ಇವು ಹೆಚ್ಚು ಸುರಕ್ಷಿತ ಎಂದು ನಂಬಲಾಗಿದೆ.

ಕ್ರಿಪ್ಟೋಕರೆನ್ಸಿಗಳ ವ್ಯವಹಾರ ಹೇಗೆ ನಡೆಯುತ್ತದೆ?

ಇವುಗಳನ್ನು ಹೊಂದಲು ಅನೇಕ ಮಾರ್ಗಗಳಿದ್ದು ಅವುಗಳನ್ನು ಒಂದೊಂದಾಗಿ ನೋಡುತ್ತಾ ಹೋಗೋಣ. ಮೊದಲನೆಯ ಮಾರ್ಗವು ಇವುಗಳನ್ನು ಷೇರು ಮಾರುಕಟ್ಟೆಯಲ್ಲಿ ಷೇರುಗಳನ್ನು ಕೊಳ್ಳುವಂತೆ ಇವುಗಳಿಗೇ ನಿಗದಿಯಾದ ಕ್ರಿಪ್ಟೋಕರೆನ್ಸಿ ವಿನಿಮಯ (ಎಕ್ಸ್‌ಛೇಂಜ್‌)ಗಳಿಂದ ಕೊಳ್ಳಬಹುದಾಗಿದೆ. ಎರಡನೆಯ ವಿಧಾನವೆಂದರೆ ಈ ಕ್ರಿಪ್ಟೋಕರೆನ್ಸಿಯ ವ್ಯವಹಾರ ನಡೆಸುವ ಕಂಪನಿಗಳು ತಮ್ಮ-ತಮ್ಮ ಫಾಸೆಟ್‌ಗಳ ಮೂಲಕ ನಿಯಮಿತ ಕಾಲಾವಧಿಗಳಲ್ಲಿ (ಉದಾಹರಣೆಗೆ 15 ನಿಮಿಷ, 30 ನಿಮಿಷ, 60 ನಿಮಿಷ, 24 ಗಂಟೆಗಳಲ್ಲಿ ಇತ್ಯಾದಿ) ಅತಿ ಸಣ್ಣ ಪ್ರಮಾಣದಲ್ಲಿ (ನಲ್ಲಿಯಿಂದ ನೀರು ಒಂದೊಂದೇ ಹನಿ ಬೀಳುವಂತೆ) ಉಚಿತವಾಗಿ ನೀಡುತ್ತವೆ. ಇದು ಬಹಳ ಕಡಿಮೆಯಾಗಿ ಸಿಗುವುದು ಹಾಗೂ ಹೆಚ್ಚಿನ ಕಾಲಾವಧಿಯನ್ನು ತೆಗೆದುಕೊಳ್ಳುವುದು. ಮೂರನೆಯ ವಿಧಾನವೆಂದರೆ ಕ್ರಿಪ್ಟೋಕರೆನ್ಸಿಗಳ ಮೈನಿಂಗ್‌ (ಯಾಂತ್ರಿಕ ಗಣಿಗಾರಿಗೆ). ಈ ವಿಧಾನದಲ್ಲಿ ಅನೇಕ ಬಗೆಯ ಯೋಜನೆಗಳಿದ್ದು ಅವುಗಳನ್ನು ಕೊಂಡುಕೊಳ್ಳುವ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಕ್ರಿಪ್ಟೋಕರೆನ್ಸಿಗಳನ್ನು ಸಂಪಾದಿಸಬಹುದಾಗಿದೆ. ಇವುಗಳೆಲ್ಲವನ್ನೂ ನಿಯಂತ್ರಿಸಲು “ಬ್ಲಾಕ್‌ಚೈನ್‌” ಎಂಬ ವ್ಯವಸ್ಥೆಯಿದ್ದು ಸಂಪೂರ್ಣ ವ್ಯವಹಾರಗಳಿಗೆ ಇದರ ಅನುಮೋದನೆ ಬೇಕಾಗುತ್ತದೆ.

ಇದರಲ್ಲಿ ವ್ಯವಹಾರ ಮಾಡುವವರು ಪ್ರತ್ಯೇಕ ಕಾಯಿನ್‌ಗಳಿಗೆ ಪ್ರತ್ಯೇಕ ವಾಲೆಟ್‌ಗಳನ್ನು (ಒಂದು ರೀತಿ ನಮ್ಮ ಹಣದ ಪರ್ಸ್‌ಗಳಿಗೆ ಹೋಲಿಸಬಹುದಾಗಿದೆ) ಸ್ಥಾಪಿಸಿಕೊಳ್ಳಬೇಕಾಗಿದ್ದು ಅದಕ್ಕೆ ಅವರಿಗೆಂದೇ ಕೊಡಲಾಗಿರುವ ನಿಗದಿಯಾದ 64 ಸಂಖ್ಯೆಗಳ (ಅಂಕೆಗಳು ಹಾಗೂ ಇಂಗ್ಲಿಷ್ ಅಕ್ಷರಗಳಿಂದ ಕೂಡಿದ) ವಾಲೆಟ್‌ ಅಡ್ರೆಸ್‌ (ವಿಳಾಸ) ನೀಡಲಾಗಿರುತ್ತದೆ. ಇದರಲ್ಲಿ ವ್ಯವಹಾರ ನಡೆಸುವವರು ಇತರರ ವಾಲೆಟ್‌ಗಳಿಗೆ ಕಾಯಿನ್‌ಗಳನ್ನು ವರ್ಗಾಯಿಸಬಹುದಾಗಿದೆ ಹಾಗೂ ಇತರರಿಂದ ಕಾಯಿನ್‌ಗಳನ್ನು ಪಡೆಯಬಹುದಾಗಿರುತ್ತದೆ. ಇದು ಸ್ಥೂಲವಾಗಿ ಕ್ರಿಪ್ಟೋಕರೆನ್ಸಿಗಳ ವ್ಯವಹಾರದಲ್ಲಿ ನಡೆಯುವ ಪ್ರಮುಖ ಘಟ್ಟಗಳು. ಇದಕ್ಕಿಂತ ಮುಖ್ಯವಿಚಾರವೆಂದರೆ ಇವುಗಳಲ್ಲಿ ಕೆಲವು ಕಾಯಿನ್‌ಗಳಿಗಿರುವ ಲಕ್ಷಾಂತರ ರೂಪಾಯಿಗಳ ಅಗಾಧ ಮೌಲ್ಯ. ಉದಾಹರಣೆಗೆ ಒಂದು ಬಿಟ್‌ಕಾಯಿನ್‌ನ ಇಂದಿನ ಮಾರುಕಟ್ಟೆಯ ಬೆಲೆ 48,37,813/= ರೂಪಾಯಿಗಳು. ಬಹತೇಕ ಜನರು ಜೀವಮಾನಪೂರಾ ದುಡಿದರೂ ಸಂಪಾದಿಸಲು ಸಾಧ್ಯವಾಗದ ಮೊತ್ತವಿದು. ಇದರಿಂದಾಗಿಯೇ, ಇದು ಇಂದು ಕರ್ನಾಟಕ ರಾಜ್ಯದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ವಿಷಯವಾಗಿದೆ.

ಇದನ್ನೂ ಓದಿ : Bitcoin ಕೇಸಲ್ಲಿ ಬಿಜೆಪಿ ನಾಯಕರ ವಿರುದ್ದ ಮುನಿಸು : ಮೋದಿ, ಅಮಿತ್‌ ಶಾಗೆ ದೂರು ಕೊಟ್ಟ ಸಿಎಂ ಬೊಮ್ಮಾಯಿ

ಇದನ್ನೂ ಓದಿ : Norovirus : ಕೇರಳದ ವಯನಾಡಿನಲ್ಲಿ ನೊರೊವೈರಸ್ ಪತ್ತೆ

( News Bit in Kannada detailing how Cryptocurrency and bitcoin business takes place )

RELATED ARTICLES

Most Popular