ನವದೆಹಲಿ : ದೇಶದಾದ್ಯಂತ ಮೂರನೇ ಹಂತದ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ. ಈ ನಡುವಲ್ಲೇ ಕೇಂದ್ರ ಸರಕಾರ ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದೆ. ಮೇ 12ರಿಂದ 15 ನಗರಗಳಿಗೆ ರೈಲು ಸೇವೆ ಆರಂಭಿಸಲು ಮುಂದಾಗಿದ್ದು, ಮೇ 11ರ ಸಂಜೆಯಿಂದಲೇ ಆನ್ ಲೈನ್ ನಲ್ಲಿ ಟಿಕೆಟ್ ಬುಕ್ಕಿಂಗ್ ಮಾಡಬಹುದಾಗಿದೆ.

ಲಾಕ್ ಡೌನ್ ಸಂಕಷ್ಟದಲ್ಲಿರುವ ಜನರ ಅನುಕೂಲಕ್ಕಾಗಿ ಮೇ 12 ರಿಂದ ವಿಶೇಷ ರೈಲು ಸಂಚಾರ ಆರಂಭವಾಗಲಿದೆ. ದೆಹಲಿಯಿಂದ ದೇಶದ ಪ್ರಮುಖ 15 ನಗರಗಳಿಗೆ ರೈಲುಗಳು ಸಂಚರಿಸಲಿವೆ, ಪ್ರಮುಖವಾಗಿ ದೆಹಲಿಯಿಂದ ಬೆಂಗಳೂರು, ಮುಂಬೈ, ಅಹಮದಾಬಾದ್, ತಿರುವನಂತಪುರ, ಚೆನ್ನೈ, ಅಗರ್ತಾಲಾ, ಪಾಟ್ನಾ, ಭುವನೇಶ್ವರ್, ಕೊಚ್ಚಿ ನಗರಗಳಿಗೆ ರೈಲು ಸೇವೆ ಲಭ್ಯವಾಗಲಿದೆ. ರೈಲು ಸೇವೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಮೇ 11ರಂದು ಸಂಜೆಯಿಂದಲೇ ರೈಲ್ವೆ ಇಲಾಖೆ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಸೇವೆ ಆರಂಭಿಸಿದೆ.

ರೈಲ್ವೆ ಟಿಕೆಟ್ ಕೌಂಟರ್ ಸಂಪೂರ್ಣವಾಗಿ ಬಂದ್ ಮಾಡಲಾಗಿದ್ದು, ಕೇವಲ ಆನ್ ಲೈನ್ ನಲ್ಲಿ ಟಿಕೆಟ್ ಬುಕ್ಕಿಂಗ್ ಮಾಡಿ ಪ್ರಯಾಣಿಸಬಹುದಾಗಿದೆ. ರೈಲ್ವೆ ಪ್ರಯಾಣಿಕರನ್ನು ಕಡ್ಡಾಯವಾಗಿ ಕೋವಿಡ್ 19 ತಪಾಸಣೆಗೆ ಒಳಪಡಿಸಲಾಗುತ್ತಿದೆ. ಕೊರೊನಾ ಸೋಂಕು ಇಲ್ಲದವರನ್ನು ಮಾತ್ರವೇ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಅಲ್ಲದೇ ರೈಲ್ವೆ ಪ್ರಯಾಣಕ್ಕೆ ಮಾಸ್ಕ್ ಕಡ್ಡಾಯಗೊಳಿಸಲಾಗಿದ್ದು, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಪ್ರಯಾಣಿಸಬಹುದಾಗಿದೆ.