ನವದೆಹಲಿ : ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್ ಡೌನ್ ಜಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ ವ್ಯವಹಾರ, ವ್ಯಾಪಾರವಿಲ್ಲದೇ ಜನತೆ ತತ್ತರಿಸಿದ್ದಾರೆ. ಹೀಗಾಗಿ ಸಾಲದ ಮರುಪಾವತಿ ಇಎಂಐಗಳಿಗೆ ಮೂರು ತಿಂಗಳುಗಳ ಕಾಲ ವಿನಾಯಿತಿ ನೀಡಲಾಗಿದೆ. ಇದರಿಂದಾಗಿ ಸಾಲಗಾರರಿಗೆ ಬಿಗ್ ರಿಲೀಫ್ ಸಿಕ್ಕಾಂತಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್, ಅವರು ಜನರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಇಎಂಐ ಪಾವತಿಯಿಂದ ವಿನಾಯಿತಿ ನೀಡಲಾಗಿದೆ. ರಾಷ್ಟ್ರೀಯ ಬ್ಯಾಂಕ್, ಖಾಸಗಿ, ಗ್ರಾಮೀಣ ಹಾಗೂ ಪ್ರಾದೇಶಿಕ ಬ್ಯಾಂಕು ಸೇರಿದಂತೆ ಎಲ್ಲಾ ಬ್ಯಾಂಕುಗಳಿಗೆ ವಿನಾಯಿತಿಯನ್ನು ನೀಡಲಾಗಿದೆ ಎಂದು ಘೋಷಿಸಿದ್ದಾರೆ. ಇದರಿಂದಾಗಿ ಗೃಹ ಸಾಲ, ಕಾರು ಸಾಲ, ವೈಯಕ್ತಿಕ ಸಾಲ, ತುರ್ತು ಸಾಲ ಸೇರಿದಂತೆ ಎಲ್ಲಾ ರೀತಿಯ ಸಾಲದ ಮರುಪಾವತಿ ಇಎಂಐಗಳಿಗೆ ವಿನಾಯಿತಿ ನೀಡಲಾಗಿದೆ. ಮಾರ್ಚ್ 1ರಿಂದಲೇ ಈ ಹೊಸ ನಿಯಮ ಅನ್ವಯವಾಗಲಿದೆ.

ಇನ್ನು ಆರ್ ಬಿಐ ಬ್ಯಾಂಕುಗಳಿಗೆ ನೀಡುವ ಸಾಲದ ದರದಲ್ಲಿಯೂ ಇಳಿಕೆ ಮಾಡಲಾಗಿದೆ. ರೆಪೋದರವನ್ನು 5.1 ರಿಂದ 4.4ಕ್ಕೆ ಇಳಿಕೆ ಮಾಡಲಾಗಿದೆ. ಕೊರೊನಾ ಎಫೆಕ್ಟ್ ನಿಂದಾಗಿ ಆರ್ಥಿಕತೆಯ ಮೇಲೆ ಹೊಡೆತ ಬೀಳಲಿದೆ. ಸಮಾಜದಲ್ಲಿ ಹಣದ ಹರಿವು ಕಡಿಮೆಯಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಆರ್ ಬಿಐ ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಆರ್ ಬಿಐನ ಸುಮಾರು 150 ನೌಕರರು ಕೂಡ ಕ್ವಾರಂಟೈನ್ ನಲ್ಲಿದ್ದಾರೆ. ಇಂತಹ ಪರಿಸ್ಥಿತಿಯನ್ನು ನಾವು ಹಿಂದೆಂದೂ ಅನುಭವಿಸಿರಲಿಲ್ಲ. ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗಿರುವುದರಿಂದ ಕೊಂಚ ಮಟ್ಟಿಗೆ ನೆಮ್ಮದಿ ಕೊಟ್ಟಿದೆ. ಕೊರೊನಾ ಹಿನ್ನೆಲೆಯಲ್ಲಿ ಆರ್ಥಿಕ ಸಮತೋಲನಕ್ಕಾಗಿ ಅಗತ್ಯ ಕ್ರಮಗಳನ್ನುಕೈಗೊಳ್ಳಲಾಗಿದೆ ಎಂದರು.