ನಟ – ನಟಿಯರು ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳೋದು ಅಪರೂಪ. ಆದರೆ ಸ್ಯಾಂಡಲ್ ವುಡ್ ನಲ್ಲಿ ಈ ಸಂಪ್ರದಾಯ ಹಿಂದಿನಿಂದಲೂ ಇದೆ. ಈ ಹಿಂದೆ ಆಸ್ಪತ್ರೆಯೇ ಇಲ್ಲದ ನೆಲಮಂಗಲದ ಹಳ್ಳಿಯೊಂದಕ್ಕೆ ಆಸ್ಪತ್ರೆ ಕಟ್ಟಿಸಿಕೊಟ್ಟಿದ್ದ ಹಿರಿಯ ನಟಿ ಲೀಲಾವತಿ (Actress Leelavathi) ಮತ್ತೊಂದು ಆಸ್ಪತ್ರೆ ನಿರ್ಮಾಣಕ್ಕೆ ನಿರ್ಧರಿಸಿದ್ದು ಭೂಮಿಪೂಜೆ ನೆರವೇರಿಸಲಾಗಿದೆ. ತಮ್ಮ ಕೈಯಲ್ಲಿರೋ ಹಣದಲ್ಲಿ ಆಸ್ಪತ್ರೆ ನಿರ್ಮಾಣ ಸಹಜ. ಆದರೆ ಈಗ ಹಿರಿಯ ನಟಿ ಲೀಲಾವತಿ ತಮ್ಮಜಮೀನು ಮಾರಿ ಆಸ್ಪತ್ರೆ ನಿರ್ಮಾಣಕ್ಕೆ ಸಿದ್ಧವಾಗಿದ್ದಾರೆ.
ನೆಲಮಂಗಲದ ಹೊರವಲಯದ ಸೋಲದೇವನಹಳ್ಳಿ ಗ್ರಾಮದಲ್ಲಿ ನಟಿ ಲೀಲಾವತಿ 10 ವರ್ಷದ ಹಿಂದೆ ಸಣ್ಣದೊಂದು ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಿದ್ದರು.ಈಗ ಅದೇ ಗ್ರಾಮದಲ್ಲಿ ಮತ್ತೊಂದು ಆಸ್ಪತ್ರೆ ನಿರ್ಮಾಣಕ್ಕೆ ಲೀಲಾವತಿಯವರು ನಿರ್ಧರಿಸಿದ್ದಾರೆ. ಆದರೆ ಹಿರಿಯ ನಟಿ ಲೀಲಾವತಿ ಈಗ ಎದ್ದು ಓಡಾಡುವಷ್ಟು ಅರೋಗ್ಯವಾಗಿಲ್ಲ. ಹೀಗಾಗಿ ನಟಿ ಲೀಲಾವತಿ ಅನುಪಸ್ಥಿತಿಯಲ್ಲಿ ನಟ ವಿನೋದ್ ರಾಜ್ ಭೂಮಿಪೂಜೆ ನೆರವೇರಿಸಿದ್ದಾರೆ. ಲೀಲಾವತಿ ಅಮ್ಮ ಜನರಿಗಾಗಿ ಆಸ್ಪತ್ರೆ ನಿರ್ಮಿಸಲು ಮುಂದಾಗಿದ್ದರು. ಇದಕ್ಕಾಗಿ ನಟಿ ಲೀಲಾವತಿ ತಮ್ಮ ಚೆನ್ನೈನಲ್ಲಿರುವ ಜಮೀನನ್ನು ಮಾರಿ ಹಣ ಸಂಗ್ರಹಿಸಿದ್ದಾರಂತೆ.
ತಾಯಿಯ ಆಸೆಗೆ ಕೊಂಚವೂ ಎದುರಾಡದೇ ತಾಯಿಯ ಆಸೆಯನ್ನು ಪೊರೈಸಲು ಮುಂದಾಗಿರುವ ನಟ ವಿನೋದ್ ರಾಜ್ ಈಗಾಗಲೇ ಚೈನೈನಲ್ಲಿರೋ ತಮ್ಮ ಜಮೀನ್ ನ್ನು ಮಾರಿ ೫೦ ಲಕ್ಷ ರೂಪಾಯಿ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಿಸಲು ಮುಂದಾಗಿದ್ದಾರೆ. ಸೋಲದೇವನಹಳ್ಳಿಯಲ್ಲಿ ನಿರ್ಮಾಣವಾಗಲಿರುವ ಈ ಅಸ್ಪತ್ರೆಯ ಭೂಮಿ ಪೂಜೆಯಲ್ಲಿ ಸ್ಥಳೀಯ ಶಾಸಕ ಡಾ.ಶ್ರೀನಿವಾಸ್ ಮೂರ್ತಿ ಭಾಗಿಯಾಗಿದ್ದು, ಲೀಲಾವತಿಯವರು ನಿರ್ಮಿಸುತ್ತಿರುವ ಆಸ್ಪತ್ರೆಗೆ ಎಲ್ಲ ಸಹಾಯ ನೀಡೋದಾಗಿ ಘೋಷಿಸಿದ್ದಾರೆ.
ಲೀಲಾವತಿಯವರ ಈ ನಿರ್ಧಾರದಿಂದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಖುಷಿಯಾಗಿದ್ದು, ತಮ್ಮ ವೈದ್ಯಕೀಯ ಅಗತ್ಯಗಳಿಗೆ ನೆರವಾಗುತ್ತಿರುವ ಲೀಲಾವತಿಯವರಿಗೆ ಧನ್ಯವಾದ ಅರ್ಪಿಸುತ್ತಿದ್ದಾರೆ. ಆದರೆ ಹಿರಿಯ ನಟಿ ಲೀಲಾವತಿ ಸ್ಥಳೀಯರಿಗೆ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿದ್ದರೂ ಸ್ವಂತ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ವಿಫಲರಾಗಿದ್ದು ದಿನದಿಂದ ದಿನಕ್ಕೆ ಲೀಲಾವತಿ ಆರೋಗ್ಯ ಕ್ಷೀಣಿಸುತ್ತಿದೆ.
ಯುವ ರಾಜ್, ಯುವರತ್ನ ಪುನೀತ್ ರಾಜ್ ಕುಮಾರ್ ನಿಧನದ ಬಳಿಕ ಲೀಲಾವತಿಯವರು ಮತ್ತಷ್ಟು ಕುಗ್ಗಿ ಹೋಗಿದ್ದು ಈಗ ಹಾಸಿಗೆ ಯಲ್ಲೇ ಮಲಗಿಕೊಂಡಿರುವ ಸ್ಥಿತಿ ತಲುಪಿದ್ದಾರೆ. ಹಿಂದೊಮ್ಮೆ ಸ್ಯಾಂಡಲ್ ವುಡ್ ನ 90 ರ ದಶಕದ ನಟಿಮಣಿಯರಾದ ಶ್ರುತಿ, ಸುಧಾರಾಣಿ, ಮಾಲವಿಕಾ ಲೀಲಾವತಿಯವರ ಮನೆಗೆ ತೆರಳಿ ಅವರ ಆರೋಗ್ಯ ವಿಚಾರಿಸಿ ಅಡುಗೆ ಮಾಡಿ ಲೀಲಾವತಿಯವರಿಗೆ ಊಟ ಮಾಡಿಸಿ ಒಂದು ದಿನ ಕಳೆದು ಬಂದಿದ್ದರು.
ಇದನ್ನೂ ಓದಿ : 10 ಗಂಟೆಯಲ್ಲಿ ಕೋಟಿ ವೀಕ್ಷಣೆ : ಕೆಜಿಎಫ್-2 ಸಾಂಗ್ ಹೊಸ ದಾಖಲೆ
ಇದನ್ನೂ ಓದಿ : ಮಲ್ಟಿಪ್ಲೆಕ್ಸ್ ನಿಂದ ಜೇಮ್ಸ್ ಕಿಕ್ ಔಟ್ ಗೆ ಒತ್ತಡ : ಬಿಜೆಪಿ ಶಾಸಕರ ವಿರುದ್ಧ ನಿರ್ಮಾಪಕರ ಅಸಮಧಾನ
( Actress Leelavathi is selling land and building a hospital)