ಬೆಂಗಳೂರು : ಸಂಸದೆ ಸುಮಲತಾ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನಡುವಿನ ಗುದ್ದಾಟ ಸದ್ಯಕ್ಕೆ ಮುಗಿಯುವ ಲಕ್ಷಣ ಗೋಚರಿಸುತ್ತಿಲ್ಲ. ಇದೀಗ ಡ್ಯಾಮ್, ಗಣಿಗಾರಿಕೆ ಬೆನ್ನಲ್ಲೇ ನಟ ಅಂಬರೀಷ್ ಸ್ಮಾರಕ ವಿಚಾರ ಇದೀಗ ವಿವಾದ ಹುಟ್ಟುಹಾಕಿದೆ. ಸ್ಮಾರಕ ನಿರ್ಮಾಣದ ಕುರಿತು ಅಂದು ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಪೇಪರ್ ನನ್ನು ನನ್ನ ಮುಖಕ್ಕೆ ಎಸೆದು ಏಕವಚನದಲ್ಲಿ ನಿಂದಿಸಿದ್ದಾರೆ ಎಂದು ಸಂಸದೆ ಸುಮಲತಾ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಸಂಸದೆ ಸುಮಲತಾ, ಎಚ್.ಡಿ.ಕುಮಾರಸ್ವಾಮಿ ವಿರುದ್ದ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ತಾನು ಅಂಬರೀಷ್ ಹೆಸರು ಹೇಳಿ ಸಿಂಪತಿ ಗಿಟ್ಟಿಸಲು ನೋಡುತ್ತಿದ್ದಾರೆ ಎನ್ನುತ್ತಿದ್ದಾರೆ. ಆದ್ರೆ ಅವರು ಈಗ ಮಾಡುತ್ತಿರೋದೇನು. ಅಂಬರೀಷ್ ಅವರ ಮೃತದೇಹವನ್ನು ಮಂಡ್ಯಕ್ಕೆ ಕೊಂಡೊಯ್ಯುವ ವಿಚಾರದಲ್ಲಿ ಏನು ನಡೆದಿದೆ ಅನ್ನೋ ಕುರಿತು ನನ್ನ ಬಳಿ ವಿಡಿಯೋ ಇದೆ. ಡಾ.ರಾಜ್ ಕುಮಾರ್, ವಿಷ್ಣುವರ್ಧನ್ ಹಾಗೂ ಅಂಬರೀಷ್ ಅವರ ಬಗ್ಗೆ ಮಾತನಾಡುವಾಗ ಸಂಸ್ಕಾರ ಇಟ್ಟುಕೊಳ್ಳಿ. ಅವರ ಅಭಿಮಾನಿಗಳಿಗೆ ನೋವಾಗುತ್ತೆ ಅಂತಾ ಹೇಳಿದ್ದಾರೆ.

ಇನ್ನು ಅಂಬರೀಷ್ ಸ್ಮಾರಕ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಸುಮಲತಾ ಎಚ್ಡಿಕೆ ವಿರುದ್ದ ಕಿಡಿಕಾರಿದ್ದಾರೆ. ಅಂಬರೀಷ್ ಅವರ ಸ್ಮಾರಕ ನಿರ್ಮಾಣ ಮಾಡುವಂತೆ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರ ಭೇಟಿ ಮಾಡಿದಾಗ, ಸ್ಮಾರಕ ನಿರ್ಮಾಣದ ದಾಖಲೆ ಪತ್ರದ ಪೇಪರ್ ನ್ನು ಮುಖಕ್ಕೆ ಎಸೆದ್ರು. ಅವನು ಏನು ಮಾಡಿದ್ದಾನೆ ಅಂತಾ ಸ್ಮಾರಕ ನಿರ್ಮಾಣ ಮಾಡಬೇಕೆಂದು ಏಕವನದಲ್ಲಿ ನಿಂದಿಸಿದ್ದಾರೆ ಎಂದು ಆರೋಪಿಸಿದ್ದಾರೆ ಸುಮಲತಾ.

ಇದೀಗ ಬಿ.ಎಸ್.ಯಡಿಯೂರಪ್ಪ ಅವರು ಅಂಬಿ ಸ್ಮಾರಕ ನಿರ್ಮಾಣದ ದಾಖಲೆಗೆ ಸಹಿ ಮಾಡಿದ್ದಾರೆ. ಇನ್ನು ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣವೂ ಆಗುತ್ತಿದೆ. ಸ್ಮಾರಕ ನಿರ್ಮಾಣದ ಕುರಿತು ಇದ್ದ ಜಾಗದ ಸಮಸ್ಯೆ ಇತ್ಯರ್ಥವಾಗಿದ್ದು, ಅಂಬರೀಷ್ ಸ್ಮಾರಕ ನಿರ್ಮಾಣದ ಮೊದಲೇ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣವಾಗಲಿದೆ ಎಂದಿದ್ದಾರೆ.

ನಿಮಗೆ ನೈತಿಕತೆ, ಸಂಸ್ಕಾರ ಇದ್ರೆ ನಿಮ್ಮ ಕೆಳಮಟ್ಟದ ರಾಜಕಾರಣಕ್ಕೆ ಅಂಬರೀಷ್ ಅವರ ಹೆಸರನ್ನು ಬಳಕೆ ಮಾಡಬೇಡಿ. ಅವರ ಹೆಸರು ಹೇಳಿಕೊಂಡು ನೀವು ರಾಜಕಾರಣ ಮಾಡಬೇಡಿ ಎಂದು ಹೇಳಿದ್ದಾರೆ.