ಬಾಲಿವುಡ್ ಬಿಗ್ ಬಿ ಪುತ್ರ ಅಭಿಷೇಕ್ ಬಚ್ಚನ್ ಶೂಟಿಂಗ್ ವೇಳೆ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತಮಿಳಿನ ಓಟು ಸೇರಪ್ಪು ಸೈಜ್ 7 ಸಿನಿಮಾ ಹಿಂದಿಗೆ ರಿಮೇಕ್ ಆಗುತ್ತಿದೆ. ಈ ಸಿನಿಮಾದ ನಾಯಕ ಪಾತ್ರದಲ್ಲಿ ಅಭಿಷೇಕ್ ಬಚ್ಚನ್ ನಟಿಸುತ್ತಿದ್ದು, ಈ ಸಿನಿಮಾ ಶೂಟಿಂಗ್ ವೇಳೆ ಅಭಿಷೇಕ್ ಬಲಗೈ ಹಾಗೂ ಬೆರಳುಗಳಿಗೆ ಗಾಯವಾಗಿದೆ.

ತಕ್ಷಣ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬ್ಯಾಂಡೇಜ್ ಹಾಕಲಾಗಿದೆ. ವೈದ್ಯರು ಅಗತ್ಯ ಪರೀಕ್ಷೆಗಳನ್ನು ಕೈಗೊಂಡಿದ್ದು, ಆತಂಕಪಡುವ ಅಗತ್ಯವಿಲ್ಲ ಎಂದು ಆಸ್ಪತ್ರೆ ಮೂಲಗಳು ಹೇಳಿವೆ. ವೈದ್ಯರು ಶೂಟಿಂಗ್ ನಿಂದ ಕೆಲ ದಿನ ಬ್ರೇಕ್ ಪಡೆಯುವಂತೆ ಹೇಳಿದ್ದಾರಂತೆ.
ಪುತ್ರ ಗಾಯಗೊಂಡ ಸುದ್ದಿ ತಿಳಿಯುತ್ತಿದ್ದಂತೆ ನಟ ಅಮಿತಾಬ್ ಬಚ್ಚನ್ ಪುತ್ರಿ ಶ್ವೇತಾ ನಂದಾ ಜೊತೆ ಆಸ್ಪತ್ರೆಗೆ ಆಗಮಿಸಿದ್ದು, ಮಗನ ಆರೋಗ್ಯ ವಿಚಾರಿಸಿದ್ದಾರೆ.ಮೂಲಗಳ ಮಾಹಿತಿ ಪ್ರಕಾರ ಐಶ್ವರ್ಯಾ ರೈ ಬಚ್ಚನ್ ತಮ್ಮ ಮಗಳ ಜೊತೆ ಮಧ್ಯಪ್ರದೇಶಕ್ಕೆ ತೆರಳಿದ್ದು ಮಣಿರತ್ನಂ ನಿರ್ದೇಶನದ ಸಿನಿಮಾ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ.