ಬೆಂಗಳೂರು : ತೀವ್ರ ಅನಾರೋಗ್ಯದಿಂದಾಗಿ ಸ್ಯಾಂಡಲ್ ವುಡ್ ನ ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ (44 ವರ್ಷ) ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬಹು ಅಂಗಾಂಗ ವೈಫಲ್ಯದಿಂದ ನಿಧನರಾಗಿದ್ದಾರೆ.

ಕಳೆದ ಹಲವು ದಿನಗಳಿಂದಲೂ ಬುಲೆಟ್ ಪ್ರಕಾಶ್ ಕಿಡ್ನಿ ಹಾಗೂ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದರು. ಅವರನ್ನು ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿತ್ತು. ತೀವ್ರ ಅನಾರೋಗ್ಯದಿಂದಾಗಿ ಅವರನ್ನು ವೆಂಟಿಲೇಟರ್ ನಲ್ಲಿಟ್ಟು ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬುಲೆಟ್ ಪ್ರಕಾಶ್ ಅವರು ನಿಧನರಾಗಿದ್ದಾರೆ.

ಕಳೆದೈದು ತಿಂಗಳ ಹಿಂದೆ ಸುಮಾರು 35 ಕೆ.ಜಿ.ತೂಕ ಕಡಿಮೆ ಮಾಡಿಕೊಂಡಿದ್ದರು. ಇದು ಬುಲೆಟ್ ಪ್ರಕಾಶ್ ಅವರ ಅನಾರೋಗ್ಯಕ್ಕೆ ಕಾರಣವಾಗಿತ್ತು. ಇದೀಗ ಬಹು ಅಂಗಾಂಗ ವೈಫಲ್ಯದಿಂದಾಗಿ ಬುಲೆಟ್ ಪ್ರಕಾಶ್ ಬಾರದ ಲೋಕಕ್ಕೆ ಪಯಣಿಸಿದ್ದಾರೆ.

2002ರಲ್ಲಿ ಧ್ರುವ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಬುಲೆಟ್ ಪ್ರಕಾಶ್, ಪಾರ್ಥ, ಓಂಕಾರ, ಅಂಬಿ, ಮಸ್ತ್ ಮಜಾ ಮಾಡಿ, ಐತಲಕ್ಕಡಿ, ಜಾಕಿ, ಮಲ್ಲಿಕಾರ್ಜುನ, ದೇವ್ರಾಣೆ, ರಜನಿಕಾಂತ, ಪರಾರಿ, ಜಟಾಯು, ಶತ್ರು, ಜಂಗಲ್ ಜಾಕಿ, ಧನು, ಸವಾಲ್, ಲವ್ ಶೋ, ನಿಂಬೆ ಹುಳಿ, ಪುಂಗಿದಾಸ, ರೋಜ್, ಆರ್ಯನ್, ಮಾಸ್ಟರ್ ಮೈಂಡ್,

ರಾಟೆ, ದಕ್ಷ, ಬಾಂಬೆ ಮಿಟಾಯಿ, ಪಾತರಗಿತ್ತಿ, ರೆಡ್ ಅಲರ್ಟ್, ಮಳೆ, ಲವ್ ಯು ಅಲಿಯಾ, ಮಿಸ್ಟರ್ ಐರಾವತ, ಗಂಗ, ಕಥೆ ಚಿತ್ರಕಥೆ ನಿರ್ದೇಶನ ಪುಟ್ಟಣ್ಣ, ಮದುವೆಯ ಮಮತೆಯ ಕರೆಯೋಲೆ, ಅಕೀರಾ, ಸಾಹೇಬಾ, ಜಗ್ಗುದಾದಾ, ರಾಜಸಿಂಹ ಸೇರಿದಂತೆ ಸುಮಾರು 325ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಬುಲೆಟ್ ಪ್ರಕಾಶ್, ದರ್ಶನ್, ಪುನಿತ್ ರಾಜ್ ಕುಮಾರ್, ಶಿವರಾಜ್ ಕುಮಾರ್, ಸುದೀಪ್ ಹಾಗೂ ಉಪೇಂದ್ರ ಅವರ ಜೊತೆಗೆ ನಟಿಸಿ ಸೈ ಎನಿಸಿಕೊಂಡಿದ್ದರು. ಬುಲೆಟ್ ಪ್ರಕಾಶ್ ಸ್ಯಾಂಡಲ್ ವುಡ್ ಕಂಡ ಶ್ರೇಷ್ಟ ಹಾಸ್ಯನಟ. ರಾಯಲ್ ಎನ್ ಫೀಲ್ಡ್ ಬುಲೆಟ್ ಓಡಿಸುವುದರಿಂದ ಇವರಿಗೆ ಬುಲೆಟ್ ಎಂಬ ಹೆಸರು ಪಡೆದುಕೊಂಡಿದ್ದಾರೆ.

ಸಿನಿಮಾ ಮಾತ್ರವಲ್ಲದೇ 2015ರಲ್ಲಿ ಬಿಜೆಪಿ ಪಕ್ಷದ ಮೂಲಕ ರಾಜಕೀಯಕ್ಕೆ ಧುಮುಕ್ಕಿದ್ದರು.

ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ಮ ಬಾಸ್ ಸೀಸನ್ -02, ಟಾಕೀಸ್ ಕಾರ್ಯಕ್ರಮದಲ್ಲಿ ಹಾಗೂ ಸೂಪರ್ ಟಾಕ್ ಟೈ ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಕೊನೆಯದಾಗಿ ಕಾಣಿಸಿಕೊಂಡಿದ್ದಾರೆ. ಬುಲೆಟ್ ಪ್ರಕಾಶ್ ಕನ್ನಡ ಮಾತ್ರವಲ್ಲದೇ ಸೋಮ್ಬೆ ಅನ್ನೋ ತುಳು ಚಲನಚಿತ್ರದಲ್ಲಿಯೂ ನಟಿಸಿದ್ದಾರೆ. ಬುಲೆಟ್ ಪ್ರಕಾಶ್ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ.