ಬೆಂಗಳೂರು : ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಮಣ್ಣಲ್ಲಿ ಮಣ್ಣಾಗಿದ್ದಾರೆ. ಚಿರನಿದ್ರೆಗೆ ಜಾರಿದ ಚಿರಂಜೀವಿ ಸರ್ಜಾ ಅಂತ್ಯಕ್ರಿಯೆ ನಟ ಧ್ರುವ ಸರ್ಜಾರ ಫಾರ್ಮ್ ಹೌಸ್ ನಲ್ಲಿ ನೆರವೇರಿತು. ಅಗಲಿದ ಮನೆ ಮಗನಿಗೆ ಕಣ್ಣೀರ ವಿವಾದ ಹೇಳಿದ್ದಾರೆ.

ಚಿರಂಜೀವಿಯಾಗಿ ಬದುಕಬೇಕಿದ್ದ ಚಿರು ಚಿರನಿದ್ರೆಗೆ ಜಾರುತ್ತಿದ್ದಂತೆಯೇ ಲಕ್ಷಾಂತರ ಮಂದಿಗೆ ಬರಸಿಡಿಲೇ ಬಂದಪ್ಪಳಿಸಿತ್ತು. ನೂರಾರು ಅಭಿಮಾನಿಗಳು, ಕುಟುಂಬಸ್ಥರ ಸಮ್ಮುಖದಲ್ಲಿ ಬೆಂಗಳೂರು ದಕ್ಷಿಣ ತಾಲೂಕಿನ ನೆಲಗುಳಿ ಗ್ರಾಮದಲ್ಲಿರುವ ಫಾರ್ಮ್ ಹೌಸ್ ನಲ್ಲಿ ಹಿಂದೂ ಸಂಪ್ರಾದಾಯದಂತೆ ಚಿರಂಜೀವಿ ಸರ್ಜಾರ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

1980 ರಂದು ಆಕ್ಟೋಬರ್ 17ರಂದು ಬೆಂಗಳೂರಿನಲ್ಲಿ ಜನಿಸಿದ್ದ ಅವರು, ಹಿರಿಯ ನಟ ಶಕ್ತಿ ಪ್ರಸಾದ್ ಅವರ ಮೊಮ್ಮಗ ಮತ್ತು ನಟ ಅರ್ಜುನ್ ಸರ್ಜಾ ಅಳಿಯ.

ಬಾಲ್ಡವಿನ್ ಬಾಲಕರ ಹೈ ಸ್ಕೂಲ್ನಲ್ಲಿ ವಿದ್ಯಾಭ್ಯಾಸ ಮುಗಿಸಿದ್ದರು. ಬಳಿಕ ವಿಜಯ ಕಾಲೇಜಿನಲ್ಲಿ ಪದವಿ ಪಡೆದಿದ್ದರು. ಅಲ್ಲದೇ 4 ವರ್ಷ ಅರ್ಜುನ್ ಸರ್ಜಾ ಜೊತೆ ಸಹ ನಿರ್ದೇಶಕನಾಗಿ ಕೆಲಸ ನಿರ್ವಹಿಸಿದ್ದರು.

ವಾಯುಪುತ್ರ, ಗಂಡೆದೆ, ಚಿರು, ದಂಡಂ ದಶಗುಣಂ, ಕೆಂಪೇಗೌಡ, ವರದನಾಯಕ, ವಿಶಲ್, ಚಂದ್ರಲೇಖ, ಅಜಿತ್, ರುದ್ರತಾಂಡವ, ಆಟಗಾರ, ರಾಮ್ಲೀಲಾ, ಆಕೆ, ಭರ್ಜರಿ, ಪ್ರೇಮ ಬರಹ, ಸಂಹಾರ, ಅಮ್ಮ ಐ ಲವ್ ಯೂ, ಸಿಂಗ, ಖಾಕಿ, ಆದ್ಯಾ, ಶಿವಾರ್ಜುನ ಸಿನಿಮಾಗಳು ತೆರೆಕಂಡಿದ್ದವು. ಆದರೆ ರಾಜಮಾರ್ತಾಂಡ, ಏಪ್ರಿಲ್, ರಣಂ, ಕ್ಷತ್ರಿಯಾ ಸಿನಿಮಾಗಳು ಶೂಟಿಂಗ್ ಹಂತದಲ್ಲಿತ್ತು.


2018ರಲ್ಲಿ ನಟಿ ಮೇಘನಾ ರಾಜ್ ಜೊತೆ ಚಿರಂಜೀವಿ ಸರ್ಜಾ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮೇಘನಾ ರಾಜ್ ಅವರು ಗರ್ಭಿಣಿಯಾಗಿದ್ದು ದಂಪತಿ ಮಗುವಿನ ನಿರೀಕ್ಷೆಯಲ್ಲಿದ್ದರು.

ಆದ್ರೆ ಹೃದಯಾಘಾತದಿಂದ ಬೆಂಗಳೂರಿನ ಅಪೋಲೋ ಸಾಗರ್ ಆಸ್ಪತ್ರೆಯಲ್ಲಿ ಚಿರಂಜೀವಿ ಸರ್ಜಾ ಕೊನೆಯುಸಿರೆಳೆದಿದ್ದರು. ಸರಳ, ಸ್ನೇಹ ಜೀವಿಯಾಗಿದ್ದ ಚಿರಂಜೀವಿ ಸರ್ಜಾ ಇನ್ನು ನೆನಪು ಮಾತ್ರ.