ಬೆಂಗಳೂರು : ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಕಳಂಕ ಅಂಟುತ್ತಿದ್ದಂತೆಯೇ ಇತ್ತೀಚೆಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದ ಯುವನಟ ಸಾವಿನ ಬಗ್ಗೆ ನಿರ್ದೇಶಕ ಇಂದ್ರಜಿತ್ ಅನುಮಾನ ವ್ಯಕ್ತಪಡಿಸುತ್ತಾ, ಮರಣೋತ್ತರ ಪರೀಕ್ಷೆ ಯಾಕೆ ಮಾಡಿಲ್ಲವೆಂದು ಪ್ರಶ್ನಿಸಿದ್ದಾರೆ.

ಇದೀಗ ಯುವ ನಟ ದಿ.ಚಿರಂಜೀವಿ ಅವರ ಮಾವ ಇಂದ್ರಜಿತ್ ಅವರ ಆರೋಪಕ್ಕೆ ತಿರುಗೇಟು ಕೊಟ್ಟಿದ್ದಾರೆ. ಮಾತ್ರವಲ್ಲ ಯಾವ ಕಾರಣಕ್ಕೆ ಮರಣೋತ್ತರ ಕಾರ್ಯ ನಡೆಸಿಲ್ಲ ಎನ್ನುವ ಬಗ್ಗೆಯೂ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ.

ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಇದೀಗ ಕನ್ನಡ ಚಿತ್ರರಂಗದಲ್ಲಿಯೇ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಸ್ಯಾಂಡಲ್ ವುಡ್ ನಟ, ನಟಿಯರು, ನಿರ್ದೇಶಕರು, ಸ್ಟಾರ್ ನಟರ ಮಕ್ಕಳು ಡ್ರಗ್ಸ್ ಮಾಫಿಯಾದಲ್ಲಿ ಸಿಲುಕಿದ್ದಾರೆಂದು ನಿರ್ದೇಶಕ ಇಂದ್ರಜಿತ್ ಗಂಭೀರ ಆರೋಪ ಮಾಡಿದ್ದರು. ಇಂದ್ರಜಿತ್ ಆರೋಪದ ಬೆನ್ನಲ್ಲೇ ಸ್ಯಾಂಡಲ್ ವುಡ್ ನಟನ ಸಾವು ಹಲವು ಅನುಮಾನಗಳನ್ನು ಹುಟ್ಟುಹಾಕಿತ್ತು.

ಈ ಕುರಿತು ಮಾತನಾಡಿರುವ ಹಿರಿಯ ನಟ ಹಾಗೂ ಚಿರಂಜೀವಿ ಸರ್ಜಾ ಅವರ ಮಾವ ಸುಂದರ್ ರಾಜ್ ಅವರು, ನಾವು ಡಾ.ರಾಜ್ಕುಮಾರ್ ಪಾಲಿಸಿ ಬೆಳೆಸಿಕೊಂಡು ಬಂದವರು, ನಮ್ಮ ಕುಟುಂಬದಲ್ಲಿ ಅಂತಹ ದುರಾಭ್ಯಾಸ ಯಾರಿಗೂ ಇಲ್ಲ. ಮುಂಬೈ ಇಂಡಸ್ಟ್ರಿಯೇ ಬೇರೆ, ಸ್ಯಾಂಡಲ್ವುಡ್ ಇಂಡಸ್ಟ್ರಿಯೇ ಬೇರೆ.

ಚಿರು ನಿಧನವಾಗಿರೋದು ಹೃದಯಾಘಾತದಿಂದ. ಕೋವಿಡ್ ಇದ್ದದ್ದರಿಂದ ಪೋಸ್ಟ್ ಮಾರ್ಟಮ್ ಮಾಡಿಲ್ಲ ಎಂದು ಸ್ಪಷ್ಟನೆಯನ್ನು ಕೊಟ್ಟಿದ್ದಾರೆ. ಅಲ್ಲದೇ ನಟ ಚಿರಂಜೀವಿ ಕಣ್ಮರೆಯಾಗಿ ಇಂದಿಗೆ ಮೂರು ತಿಂಗಳು ಕಳೆದಿದೆ. ಇಂತಹ ಸಂದರ್ಭದಲ್ಲಿ ಈ ಕುರಿತು ಮಾತನಾಡುವ ಸ್ಥಿತಿಯಲ್ಲಿ ನಾವಿಲ್ಲ ಎಂದಿದ್ದಾರೆ.