ಚಿರನಿದ್ರೆಗೆ ಜಾರಿರುವ ನಟ ಚಿರಂಜೀವಿ ಸರ್ಜಾ ಅವರ ಅಂತ್ಯಕ್ರೀಯೆ ಇಂದು ನಡೆಯಲಿದೆ. ಚಿರಂಜೀವಿ ಸರ್ಜಾ ಸಹೋದರ ತಮ್ಮ ಧ್ರುವ ಸರ್ಜಾ ಅವರ ಕನಕಪುರ ರಸ್ತೆಯ ಬಳಿಯಲ್ಲಿರುವ ಫಾರ್ಮ್ ಹೌಸ್ ನಲ್ಲಿ ನಡೆಯಲಿದೆ.

ಹೃದಯಾಘಾತದಿಂದ ಭಾನುವಾರ ನಿಧನರಾದ ಚಿರಂಜೀವಿ ಸರ್ಜಾ ಅವರ ಮೃತದೇಹವನ್ನು ಬಸವನಗುಡಿಯ ಅವರ ನಿವಾಸದಲ್ಲಿ ಇರಿಸಲಾಗಿದೆ. ಸೋಮವಾರ ಮಧ್ಯಾಹ್ನದ ವರೆಗೂ ಚಿರಂಜೀವಿ ಸರ್ಜಾ ಅವರ ಪಾರ್ಥಿವ ಶರೀರದ ಅಂತಿಮಯಾತ್ರೆಗೆ ಅವಕಾಶವನ್ನು ಕಲ್ಪಿಸಲಾಗಿದೆ. ನಂತರ ಕನಕಪುರ ರಸ್ತೆಯ ಬಳಿಯ ನೆಲಗೂಳಿ ಗ್ರಾಮದಲ್ಲಿರುವ ಫಾರ್ಮ್ ಹೌಸ್ ನಲ್ಲಿ ಅಂತ್ಯಕ್ರೀಯೆ ನಡೆಯಲಿದೆ.

ಆರಂಭದಲ್ಲಿ ಹುಟ್ಟೂರಾಗಿರುವ ಮಧುಗಿರಿಯ ಜಕ್ಕೇನಹಳ್ಳಿಯಲ್ಲಿರುವ ಅಜ್ಜಿಯ ಮನೆಯಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಹೇಳಲಾಗಿತ್ತು. ಆದರೆ ಕುಟುಂಬಸ್ಥರು ಧ್ರುವ ಸರ್ಜಾ ಅವರ ಫಾರ್ಮ್ ಹೌಸ್ ನಲ್ಲಿ ಅಂತ್ಯಕ್ರಿಯೆ ನಡೆಸಲು ಮಾತುಕತೆ ನಡೆಸಲಾಗಿದೆ ಎಂದು ಸರ್ಜಾ ಕುಟುಂಬದ ಆಪ್ತರಾಗಿರುವ ಶಿವಾರ್ಜುನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಚಿರಂಜೀವಿ ಸರ್ಜಾ ಅವರ ಮಾವ ಅರ್ಜುನ್ ಸರ್ಜಾ ಚೆನೈನಿಂದ ತಡರಾತ್ರಿ ಬೆಂಗಳೂರಿಗೆ ಆಗಮಿಸಿದರು. ಚಿರು ಪಾರ್ಥಿವ ಶರೀರವನ್ನು ಕಂಡು ಅರ್ಜುನ್ ಸರ್ಜಾ ಬಿಕ್ಕಿ ಬಿಕ್ಕಿ ಅತ್ತ ದೃಶ್ಯ ಮನಕಲಕುವಂತಿತ್ತು.

ಸ್ಯಾಂಡಲ್ ವುಡ್ ನಟರಾಗಿ ಹೆಸರು ಮಾಡಿದ್ದ ಚಿರಂಜೀವಿ ಸರ್ಜಾ ಸುಮಾರು 22 ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಿರಂಜೀವಿ ಸರ್ಜಾ ನಿಧನಕ್ಕೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆಯಷ್ಟೇ ನಟಿ ಮೇಘನಾ ರಾಜ್ ಅವರನ್ನು ವಿವಾಹವಾಗಿದ್ದರು. ನಟಿ ಮೇಘನಾ ಇದೀಗ 4 ತಿಂಗಳ ಗರ್ಭೀಣಿಯಾಗಿದ್ದು ಪತಿಯ ಸಾವು ಆಘಾತವನ್ನು ತರಿಸಿದೆ. ವಿಧಿಯ ಕ್ರೂರ ಆಟಕ್ಕೆ ಬಲಿಯಾಗಿ ಚಿಕ್ಕ ವಯಸ್ಸಿನಲ್ಲಿಯೇ ಬಾರದ ಲೋಕಕ್ಕೆ ಪಯಣಿಸಿರುವ ಚಿರಂಜೀವಿ ಸರ್ಜಾ ಅವರ ಸಾವನ್ನ ಅಭಿಮಾನಿಗಳಿಗೆ ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ.