ಬೆಂಗಳೂರು : ಕೊರೊನಾ ವೈರಸ್ ಸೋಂಕಿನಿಂದಾಗಿ ಸ್ಯಾಂಡಲ್ ವುಡ್ ಹಿರಿಯ ನಟ ಹುಲಿವಾನ್ ಗಂಗಾಧರಯ್ಯ (70) ಮೃತಪಟ್ಟಿದ್ದಾರೆ. ಶುಕ್ರವಾರ ರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಉಸಿರಾಟದ ಸಮಸ್ಯೆ ಇದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು ಆದರೆ ಚಿಕಿತ್ಸೆ ಫಲಿಸದೆ ಅವರು ಸಾವನ್ನಪ್ಪಿದ್ದಾರೆ.

ರಂಗಭೂಮಿ ಹಿನ್ನೆಲೆಯಿಂದ ಬಂದಿದ್ದ ಗಂಗಾಧರಯ್ಯ ಸುಮಾರು 118 ಸಿನಿಮಾ ಮತ್ತು , 1500 ನಾಟಕಗಳಲ್ಲಿ ಪಾತ್ರ ನಿರ್ವಹಿಸಿದ್ದರು. ಕುರಿಗಳು ಸರ್ ಕುರಿಗಳು, ನೀರ್ ದೋಸೆ, ಅಪ್ಪು, ಕ್ವಾಟ್ಲೆ ಸತೀಶ, ಕರ್ವ, ಶಬ್ದವೇಧಿ ಸೇರಿ ಅನೇಕ ಸಿನಿಮಾಗಳಲ್ಲಿ ಗಂಗಾಧರಯ್ಯ ಪೋಷಕ ಪಾತ್ರ ನಿರ್ವಹಿಸಿದ್ದರು.

ಕಿರುತೆರೆಯ ಧಾರಾವಾಹಿ “ಪ್ರೇಮಲೋಕ: ದಲ್ಲಿ ಅಭಿನಯಿಸುತ್ತಿದ್ದ ಗಂಗಾಧರಯ್ಯನವರಿಗೆ ಶೂಟಿಂಗ್ ನಲ್ಲಿದ್ದಾಗಲೇ ಜ್ವರ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊರೊನಾ ಪಾಸಿಟಿವ್ ಬಂದ ಕಾರಣಕ್ಕೆ ಗಂಗಾಧರ್ ಅವರು ಡಿಪ್ರೆಶನ್ ಗೆ ಒಳಗಾಗಿದ್ದು, ಮಕ್ಕಳ ಜೊತೆಗೆ ಮಾತನಾಡುವುದನ್ನೇ ನಿಲ್ಲಿಸಿದ್ದರು. ಇದೀಗ ಮೂವರು ಹೆಣ್ಣು ಮಕ್ಕಳು ಹಾಗೂ ಪತ್ನಿಯನ್ನು ಅಗಲಿದ್ದಾರೆ. ಹುಲಿವನ ಗಂಗಾಧರ್ ಅವರ ನಿಧನಕ್ಕೆ ಚಿತ್ರ ನಟನಟಿಯರು ಕಂಬನಿ ಮಿಡಿದಿದ್ದಾರೆ.