ಕಳೆದ ತಿಂಗಳು ಆಕ್ಷನ್ ಪ್ರಿನ್ಸ್ ಧೃವ ಸರ್ಜಾ ಆಗಮಿಸಿ ಕ್ಲಾಪ್ ಮಾಡಿದ್ದ ಸಿನಿಮಾ ಧೀರ ಸಾಮ್ರಾಟ್ ಇದೀಗ ಮೊದಲ ಹಂತದ ಚಿತ್ರೀಕರಣ ಮುಗಿಸಿ, ಎರಡನೇ ಹಂತದ ಚಿತ್ರೀಕರಣಕ್ಕೆ ಸಿದ್ಧತೆ ನಡೆಸುತ್ತಿದೆ.

ತನ್ವಿ ಪ್ರೊಡಕ್ಷನ್ ಆಡಿಯಲ್ಲಿ ನಿರ್ಮಾಣವಾಗುತ್ತಿರೋ ಈ ಸಿನಿಮಾಕ್ಕೆ ಗುರುಬಂಡಿ ಬಂಡವಾಳ ಹೂಡಿದ್ದು, ಆನಂದ್ ವಾರಿಕ್ ನಿರ್ಮಾಣದಲ್ಲಿ ಸಾಥ್ ಕಟ್ಟಿದ್ದಾರೆ.

ಅನೇಕ ಖಾಸಗಿ ವಾಹಿನಿಗಳಲ್ಲಿ ನಿರೂಪಕನಾಗಿ ನಟನಾಗಿ ಗುರುತಿಸಿಕೊಂಡಿದ್ದ ಪವನ್ ಕುಮಾರ್ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್ ತೊಟ್ಟಿದ್ದು, ಮೊದಲ ಹಂತದ ಚಿತ್ರೀಕರಣ ಯಶಸ್ವಿಗೊಳಿಸಿರೋ ಖುಷಿಯಲ್ಲಿದ್ದಾರೆ.

ಚಿತ್ರದ ಮುಖ್ಯಭೂಮಿಕೆಯಲ್ಲಿ ರಾಕೇಶ್ ಬಿರಾದರ್ ಮತ್ತು ಅದ್ವಿತಿ ಶೆಟ್ಟಿ ಅಭಿನಯಿಸಿದ್ದು, ರಾಕೇಶ್ ಅವರಿಗೆ ನಾಯಕನಾಗಿ ಎರಡನೇ ಸಿನಿಮಾ ಇದು. ಮೊದಲ ಸಿನಿಮಾ ಸಂಪ್ಲಿಮೆಂಟರಿ ಅಷ್ಟಾಗಿ ಸದ್ದು ಮಾಡದಿದ್ದರೂ, ಈ ಧೀರ ಸಾಮ್ರಾಟ್ ಸಿನಿಮಾ ಮೂಲಕ ಚಂದನವನದಲ್ಲಿ ಒಂದು ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

ನಾಯಕ ರಾಕೇಶ್ ಜೊತೆ ಮುಖ್ಯ ಪಾತ್ರಧಾರಿಗಳಾಗಿ ಸಂಕಲ್ಪ್ , ರವಿರಾಜ್, ಗಿರಿಧರ್ ಮುಂಜುನಾಥ್ ಮತ್ತು ಹರೀಶ್ ಅರಸು ಅಭಿನಯಿಸುತ್ತಿದ್ದಾರೆ.

ಇನ್ನುಳಿದಂತೆ ತಾರಾಂಗಣದಲ್ಲಿ ನಾಗೇಂದ್ರ ಅರಸ್, ಯತಿರಾಜು, ಶೋಭರಾಜ್, ಬಾಲ ರಾಜ್ವಾಡಿ, ರವೀಂದ್ರನಾಥ್, ಮನಮೋಹನ್ ರೈ, ರಮೇಶ್ ಭಟ್, ಮಂಡ್ಯ ಚಂದ್ರು, ಇಂಚರ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಈ ಹಾರರ್ ಶೇಡ್ ಇರೋ ಸಸ್ಪೆನ್ಸ್ , ಥ್ರಿಲ್ಲರ್ ಸಿನಿಮಾಕ್ಕೆ ವೀರೇಶ್ ಕ್ಯಾಮೆರಾ ಕೈಚಳಕ ತೋರಿಸಿದ್ದು, ಸತೀಶ್ ಚಂದ್ರಯ್ಯ ಎಡಿಟಿಂಗ್ ಜವಾಬ್ದಾರಿ ಹೊತ್ತಿದ್ದಾರೆ.

ಮ್ಯೂಸಿಕ್ ವಿಚಾರಕ್ಕೆ ಬಂದ್ರೆ ಮೂರು ಹಾಡುಗಳು ರೆಡಿಯಾಗಿದ್ದು, ನಾಗೇಂದ್ರ ಪ್ರಸಾದ್ , ಬಹದ್ದೂರ್ ಚೇತನ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ರಾಘವ್ ಸುಭಾಷ್ ಚಿತ್ರಕ್ಕೆ ಸಂಗೀತ ನೀಡಿದ್ದು, ಹೊಸತನದ ಹಾಡುಗಳನ್ನು ಕೊಡುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.

ಬಹುತೇಕ ಮಾತಿನ ಭಾಗ ಚಿತ್ರೀಕರಣ ಮುಗಿಸಿದ್ದು, ಹಾಡುಗಳು ಮತ್ತು ಸಾಹಸ ದೃಶ್ಯ ಚಿತ್ರೀಕರಿಸಲು ಸಜ್ಜಾಗುತ್ತಿದ್ದು, ಕೌರವ ವೆಂಕಟೇಶ್ ಫೈಟ್ಸ್ ಕಂಪೋಸ್ ಮಾಡಲಿದ್ದಾರೆ. ಈ ತಿಂಗಳ ಅಂತ್ಯಕ್ಕೆ ಎರಡನೇ ಹಂತದ ಚಿತ್ರೀಕರಣಕ್ಕೆ ತೆರಳಲಿರೋ ಚಿತ್ರತಂಡಕ್ಕೆ ನಮ್ ಕಡೆಯಿಂದ ಶುಭಹಾರೈಕೆ.