ಮೇಘನಾ ರಾಜ್ ಸರ್ಜಾ… ಸಿನಿಮಾ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ ನಟಿ. ಸ್ಯಾಂಡಲ್ ವುಡ್ ನ ಹಿರಿಯ ಪೋಷಕ ನಟ-ನಟಿ ದಂಪತಿಯರಾದ ಪ್ರಮೀಳಾ ಜೋಷಾಯ್ ಹಾಗೂ ಸುಂದರ ರಾಜ್ ದಂಪತಿಗಳ ಪುತ್ರಿ ಕಳೆದ ಕೆಲ ತಿಂಗಳಿನಲ್ಲಿ ಬದುಕಿನ ಅತ್ಯಂತ ನೋವಿನ ಕ್ಷಣಗಳನ್ನು ಉಂಡು ನೊಂದು ಬೆಂದು ಹೋದವರು. ಹೀಗಾಗಿ ಮತ್ತೆ ಮೇಘನಾ ರಾಜ್ ನಟನೆಗೆ ಬರ್ತಾರಾ ಅನ್ನೋ ಆತಂಕ ಅಭಿಮಾನಿಗಳಿಗೆ.

ಆದರೆ ಕಳೆದ ತಿಂಗಳು ಜ್ಯೂನಿಯರ್ ಚಿರು ಜನನದ ಬಳಿಕ ಒಂದಷ್ಟು ಚೇತರಿಸಿಕೊಂಡಿರೋ ಮೇಘನಾ ಸಧ್ಯ ಮಗ ಲಾಲನೆ-ಪಾಲನೆ ಯಲ್ಲಿ ಚಿರು ಅಗಲಿಕೆಯ ನೋವನ್ನು ಮರೆಯುವ ಪ್ರಯತ್ನದಲ್ಲಿದ್ದಾರೆ. ಇಂದು ತಮ್ಮ ನಿವಾಸದಲ್ಲಿ ನಡೆದ ತೊಟ್ಟಿಲ ಶಾಸ್ತ್ರದಲ್ಲಿ ಮಾಧ್ಯಮ ಗಳ ಜೊತೆ ಮಾತನಾಡಿದ ಮೇಘನಾ ತಮ್ಮ ಮುಂದಿನ ಬದುಕಿನ ಬಗ್ಗೆ ಮುಕ್ತವಾದ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಮೇಘನಾ ಸರ್ಜಾ ನಟನೆ ಮುಂದುವರೆಸುತ್ತಾರೋ ಇಲ್ವೋ ಅನ್ನುವ ಪ್ರಶ್ನೆಯೇ ಇಲ್ಲ. ನಟನೆ ಅನ್ನೋದು ನನ್ನ ಫ್ಯಾಶನ್… ನನ್ನ ಕನಸು. ಸಿನಿಮಾ ಅಭಿನಯ ನನ್ನ ರಕ್ತದಲ್ಲೇ ಬಂದಿದೆ. ಹೀಗಾಗಿ ನಟನೆ ಬಿಡುವ ಮಾತೇ ಇಲ್ಲ. ಸಧ್ಯ ಒಂದು ಬ್ರೇಕ್ ತೆಗೆದುಕೊಂಡಿದ್ದೇನೆ. ಸೂಕ್ತ ಸಂದರ್ಭದಲ್ಲಿ ಖಂಡಿತಾ ನಟನೆಗೆ ಮರಳುತ್ತೇನೆ ಎಂದಿದ್ದಾರೆ.

ನಾನು,ನನ್ನ ಕುಟುಂಬ ಎಲ್ಲರಿಗೂ ನಟನೆ ಬಿಟ್ಟು ಬೇರೆ ಏನು ಗೊತ್ತಿಲ್ಲ. ಬೇರೆ ಏನಾದ್ರು ಮಾಡೋದು ಅಂದ್ರೇ ಪ್ರೊಡಕ್ಷನ್ ಅಥವಾ ಡೈರೈಕ್ಷನ್ ಬಗ್ಗೆ ಯೋಚಿಸಬಹುದಷ್ಟೇ. ಆದರೆ ಸಿನಿಮಾರಂಗ ನನ್ನ ಜೀವಾಳ. ನಾನು ಖಂಡಿತಾ ನಟನೆಗೆ ಮರಳುತ್ತೇನೆ. ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ.

ಅಷ್ಟೇ ಅಲ್ಲ ಯಾವುದಾದರೂ ದುರ್ಘಟನೆ ಬಳಿಕ ನಾವು ಬದುಕಿನಲ್ಲಿ ಮುಂದೇ ಸಾಗಬೇಕು. ನಾನು ಅಷ್ಟೇ ಈ ಎಲ್ಲ ನೋವುಗಳಿಂದ ಹೊರಬಂದುಸಿನಿಮಾದಲ್ಲಿ ತೊಡಗಿಕೊಳ್ಳುತ್ತೇನೆ. ಅಷ್ಟೇ ಅಲ್ಲ ನನ್ನ ಕೊನೆಯ ಉಸಿರು ಇರುವರೆಗೂ ನಾನು ನಟಿಸುತ್ತೇನೆ ಎನ್ನುವ ಮೂಲಕ ಸಿನಿಮಾರಂಗವೇ ತಮ್ಮ ಆಯ್ಕೆ ಎಂಬುದನ್ನು ಮೇಘನಾ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಸ್ಯಾಂಡಲ್ ವುಡ್ ನ ಹಲವು ಚಿತ್ರಗಳಲ್ಲಿ ನಟಿಸಿದ್ದರೂ ಮೇಘನಾ ರಾಜ್ ಮಲೆಯಾಳಂ ಸೇರಿದಂತೆ ಬೇರೆ ಭಾಷೆಗಳಲ್ಲೇ ಹೆಚ್ಚು ಸಿನಿಮಾ ಮಾಡಿದ್ದು, ಸಧ್ಯ ಕನ್ನಡದಲ್ಲಿ ಅವರ ಎರಡು ಚಿತ್ರಗಳು ಬಿಡುಗಡೆಗೆ ಬಾಕಿ ಇದೆ. ಮುನಿರತ್ನ ನಿರ್ಮಾಣದ ಬಿಗ್ ಬಜೆಟ್ ಚಿತ್ರ ಕುರುಕ್ಷೇತ್ರದಲ್ಲೂ ಮೇಘನಾ ರಾಜ್ ನಟಿಸಿದ್ದರು.

ಚಿರು ನಿಧನಕ್ಕೂ ಮುನ್ನ ಇಂಟರ್ ವ್ಯೂವೊಂದರಲ್ಲಿ ಮಾತನಾಡಿದ್ದ ಮೇಘನಾ ರಾಜ್, ಕನ್ನಡದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ನಾನಾಗಬೇಕೆಂಬುದು ನನ್ನ ಕನಸು. ಅದನ್ನು ನಾನು ಈಢೇರಿಸಿಕೊಳ್ಳುತ್ತೇನೆ ಎಂದಿದ್ದರು.