ನಾಲ್ಕು ತಿಂಗಳ ನಂತರ ಖುಷಿ, ಸಂಭ್ರಮ, ನಗು ನೋಡುತ್ತಿರುವ ಚಿರು ಸರ್ಜಾ ಹಾಗೂ ಮೇಘನಾ ರಾಜ್ ಕುಟುಂಬ ಮೂರು ತಿಂಗಳ ನಂತರ ಮಗುವಿನ ನಾಮಕರಣ ನಡೆಸಲು ನಿರ್ಧರಿಸಿದೆ.

ಕಳೆದ ಒಂದು ವಾರದ ಹಿಂದೆ ಗಂಡು ಮಗುವಿಗೆ ಜನ್ಮನೀಡಿದ ನಟಿ ಮೇಘನಾ ರಾಜ್ ವಿಜಯ ದಶಮಿಯ ಶುಭದಿನದಂದು ಆಸ್ಪತ್ರೆಯಿಂದ ಮನೆಗೆ ತೆರಳಿದ್ದು, ಗೋಧೂಳಿ ಶುಭಮುಹೂರ್ತದಲ್ಲಿ ನಟ ಸುಂದರರಾಜ್ ಹಾಗೂ ಪ್ರಮೀಳಾ ಜೋಷಾಯ್ ದಂಪತಿ ಮೊಮ್ಮಗುವನ್ನು ಬರಮಾಡಿಕೊಂಡಿ ದ್ದಾರೆ.

ಮಗುವಿನ ನಾಮಕರಣ ಸೇರಿದಂತೆ ಎಲ್ಲ ವಿಚಾರಗಳ ಜೊತೆ ವಿವರವಾಗಿ ಮಾಧ್ಯಮದ ಜೊತೆ ಮಾತನಾಡಿದ ಸುಂದರ ರಾಜ್, ಮಗುವನ್ನು ನೋಡಿಕೊಳ್ಳುವುದು ತಾಯಿ ಕರ್ತವ್ಯ. ಮಗಳನ್ನು ನೋಡಿಕೊಳ್ಳುವುದು ತಂದೆ- ತಾಯಿ ಕರ್ತವ್ಯ.

ಹೀಗಾಗಿ ಮೇಘನಾ ರಾಜ್ ರನ್ನು ನಾವು ನಮ್ಮ ಮನೆಗೆ ಕರೆತಂದಿದ್ದೇವೆ. ಜ್ಯೂನಿಯರ್ ಚಿರು ಸರ್ಜಾ ಕುಟುಂಬದ ಕುಡಿ. ನಮ್ಮ ಮೊಮ್ಮಗ. ಹೀಗಾಗಿ ಆತ ಎರಡು ಮನೆಯ ಹಕ್ಕು. ಎರಡೂ ಮನೆಯಲ್ಲೂ ಬೆಳೆಯಲಿದ್ದಾನೆ ಎಂದರು.

ಸಧ್ಯಕ್ಕೆ ನಾನು ಮಗುವನ್ನು ಚಿಂಟೂ ಎಂದು ಕರೆಯುತ್ತಿದ್ದು, ಮೇಘನಾ ಪಾಪು ಎಂದು ಕರೆಯುತ್ತಿ ದ್ದಾಳೆ. ಕೊರೋನಾ ಹಿನ್ನೆಲೆಯಲ್ಲಿ ಮೇಘನಾ ಜಾಸ್ತಿ ಹೊರಕ್ಕೆ ಬರೋದು ಸಾಧ್ಯವಾಗುತ್ತಿಲ್ಲ. ನವೆಂಬರ್ 1 ರಂದು ಮೇಘನಾ ರಾಜ್ ನಿಮ್ಮೆಲ್ಲರ ಜೊತೆ ಮಾತನಾಡಲಿದ್ದಾರೆ ಎಂದು ವಿವರಣೆ ನೀಡಿದ್ದಾರೆ.

ಮಗಳ ಬದುಕಿನ ಬಗ್ಗೆ ಭಾವುಕರಾಗಿ ಮಾತನಾಡಿದ ಸುಂದರ ರಾಜ್, ದೇವರು ಸುಂದರವಾದ ಮಗಳನ್ನು ಕೊಟ್ಟ. ಆದರೆ ಆಕೆಗೆ ಸುಂದರವಾದ ಬದುಕು ಕೊಡಲಿಲ್ಲ. ಮದುವೆಯಾದ ಎರಡನೇ ವರ್ಷಕ್ಕೆ ಪ್ರೀತಿಸಿ ಮದುವೆಯಾದ ಚಿರು ಹೋಗಿಬಿಟ್ಟ.

ಮಗಳನ್ನು ಹೀಗೆ ನೋಡಲು ತುಂಬ ಕಷ್ಟವಾಗುತ್ತಿದೆ. ಆ ಮನೆಗೆ ಮಗನನ್ನು ಕಳೆದುಕೊಂಡ ನೋವು, ನಮಗೆ ಅಳಿಯನನ್ನು ಕಳೆದುಕೊಂಡ ನೋವು. ಈಗ ಈ ಪುಟ್ಟ ಮಗು ಬೆಳೆಯುವವರೆಗೂ ನನಗೆ ಆಯುಷ್ಯ ಕೊಡು ಎಂದು ಬೇಡಿಕೊಳ್ಳುತ್ತೇನೆ ಎಂದಿದ್ದಾರೆ.

ಮೂರು ತಿಂಗಳ ನಂತರ ನಾಮಕರಣದ ವೇಳೆ ಮಗುವಿನ ಹೆಸರು ಏನೆಂದು ತೀರ್ಮಾನವಾಗಲಿದೆ. ಮಗು ಥೇಟ್ ಚಿರುನಂತೆಯೇ ಇದ್ದು, ಮೂಗಂತೂ ಚಿರುದೇ. ಹೀಗಾಗಿ ಜ್ಯೂನಿಯರ್ ಚಿರುವನ್ನು ನೋಡಿ ನಮ್ಮ ದುಃಖ ಮರೆಯುವ ಪ್ರಯತ್ನ ಮಾಡುತ್ತೇವೆ ಎಂದಿದ್ದಾರೆ.