Kantara Manasi Sudhir : ಮಾನಸಿ ಸುಧೀರ್.. ಸದ್ಯ ಈ ಹೆಸರು ಕೇಳದವರು ವಿರಳಾತಿ ವಿರಳ. ರಾಷ್ಟ್ರಪ್ರಶಸ್ತಿ ವಿಜೇತ ನೃತ್ಯ ಕಲಾವಿದೆಯಾಗಿರುವ ಮಾನಸಿ ಕಾಂತಾರ ಸಿನಿಮಾದ ಮೂಲಕ ಬಹು ಪ್ರಖ್ಯಾತಿ ಪಡೆದುಕೊಂಡಿದ್ದಾರೆ. ಸದಾ ಹೊಸತನಕ್ಕೆ ಹಂಬಲಿಸುವ ಅಪರೂಪದ ಕಲಾವಿದೆ ಇದೀಗ ಭಾರತ ಸಂವಿಧಾನದ ಮಹತ್ವವನ್ನು ಸಾರುವ ನೃತ್ಯ ರೂಪಕದ ಮೂಲಕ ಮತ್ತೆ ಎಂಟ್ರಿಕೊಟ್ಟಿದ್ದಾರೆ.
ಉಡುಪಿ ಜಿಲ್ಲೆಯ ಪ್ರಸಿದ್ದ ಕಡಲತೀರವಾಗಿರುವ ಮಲ್ಪೆಯಲ್ಲಿ ತನ್ನ ಶಿಷ್ಯರೊಡಗೂಡಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಸಮರ್ಪಣೆಯೊಂದಿಗೆ ಆರಂಭ ಗೊಳ್ಳುವ ನೃತ್ಯ ರೂಪಕ ಸಂವಿಧಾನದ ಮಹತ್ವವನ್ನು ಜನರಿಗೆ ತಿಳಿ ಹೇಳುವ ಕಾರ್ಯವನ್ನು ಮಾಡಿದ್ದಾರೆ. ರಾಜ್ಯ ಸರಕಾರ ಶಾಲೆಗಳಲ್ಲಿ ಸಂವಿಧಾನದ ಪೀಠಿಕೆ ಪಠಣವನ್ನು ಕಡ್ಡಾಯಗೊಳಿಸಿದೆ. ಸಂವಿಧಾಜ ತಜ್ಞರನ್ನು ಶಾಲೆಗೆ ಆಹ್ವಾನಿಸಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನೂ ಆಯೋಜಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಂವಿಧಾನದ ಕುರಿತು ಜನರಲ್ಲಿ ಅರಿವು ಮೂಡಿಸುವ ಜೊತೆಗೆ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವನ್ನು ನೆನಪಿಸುವ ಸಲುವಾಗಿಯೇ ಮಾನಸಿ ಸುಧೀರ್ ಅವರ ತಂಡ ಇಂತಹದ್ದೊಂದು ವಿಭಿನ್ನ ಪ್ರಯತ್ನವನ್ನು ಮಾಡಿದೆ.

ನೃತ್ಯಗುರು ಸುಧೀರ್ ರಾವ್ ಕೊಡವೂರು, ಕಾವ್ಯ ಅವರ ಸಹಕಾರದಲ್ಲಿ ಮೂಡಿಬಂದಿರುವ ಈ ಪ್ರಸ್ತುತಿಯಲ್ಲಿ ಮಾನಸಿ ಸುಧೀರ್, ಸುರಭಿ, ಸೌಂದರ್ಯ, ಶೀತಲ್, ಚೈತನ್ಯಾ ಅವರು ಕಲಾವಿದರಾಗಿ ಕಾಣಿಸಿಕೊಂಡಿದ್ದಾರೆ. ಡಾ.ಶ್ರೀಪಾದ ಭಟ್ ಅವರ ಪರಿಕಲ್ಪನೆಯಲ್ಲಿ ಮೈಸೂರಿನ ನಾವು ಸ್ಟುಡಿಯೋಸ್‌ನ ಅನುಷ್ ಶೆಟ್ಟಿ ಅವರ ಸಂಗೀತ ಸಂಯೋಜನೆಯಲ್ಲಿ ಹಾಡು ಅದ್ಬುತವಾಗಿ ಮೂಡಿಬಂದಿದೆ. ಅಲ್ಲದೇ ಈ ನೃತ್ಯ ರೂಪಕ ಮಾನಸಿ ಸುಧೀರ್ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು, ಎಲ್ಲರಿಂದಲೂ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ.

ನೃತ್ಯ ಕಲಾವಿದೆಯಾಗಿ, ನೃತ್ಯ ಗುರುವಾಗಿ ಮಾನಸಿ ಸುಧೀರ್ ಈಗಾಗಲೇ ಸಾಧನೆಯ ಶಿಖರವೇರಿದ್ದಾರೆ. ಈ ಹಿಂದೆಯಲ್ಲಿ ಕೊರೊನಾ ಲಾಕ್‌ಡೌನ್ ಬಿಡುವಿನಲ್ಲಿ ಹೊಸತನದ ತುಡಿತದಿಂದ ಭಾವಗೀತೆಗಳಿಗೆ ಜೀವ ತುಂಬುವ ಕಾರ್ಯವನ್ನು ಆರಂಭಿಸಿದ್ದರು. ಈ ವೇಳೆಯಲ್ಲಿ ಮೂಡಿ ಬಂದ ಹೇಗಿದ್ದೀಯೇ ಟ್ವಿಂಕಲ್ ಹಾಡು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ನಂತರದಲ್ಲಿ ಮೂಡಿಬಂದ ಏನೀ ಅದ್ಬುತವೇ ಹಾಡು ಅದ್ಬುತವನ್ನೇ ಸೃಷ್ಟಿ ಮಾಡಿತ್ತು. ಅದ್ರಲ್ಲೂ ಕುಂತ್ರ ನಿಂತ್ರ ಅವಂದೇ ಧ್ಯಾನ ಹಾಡು ಜನಮೆಚ್ಚುಗೆಯನ್ನು ಪಡೆದುಕೊಂಡಿತ್ತು. ಮಾನಸಿ ನೃತ್ಯಗಾರ್ತಿ ಮಾತ್ರವಲ್ಲ ಓರ್ವ ಅದ್ಬುತ ನಟಿ, ಹಾಡುಗಾರ್ತಿ. ಪತಿ ಸುಧೀರ್ ರಾವ್ ಅವರ ಜೊತೆಗೂಡಿ ಮಾನಸಿ ಸುಧೀರ್ ಅವರು ನೃತ್ಯ ಶಾಲೆಯೊಂದನ್ನು ಮುನ್ನೆಡೆಸುತ್ತಿದ್ದಾರೆ. ಈ ಮೂಲಕ ಮುಂದಿನ ಪೀಳಿಗೆಗೆ ಭಾರತದ ಪಾರಂಪರಿಕ ನೃತ್ಯಕಲೆಯನ್ನು ಧಾರೆಯೆರೆಯುವ ಕಾರ್ಯವನ್ನು ಮಾಡುತ್ತಿದ್ದಾರೆ.

ಕನ್ನಡ ಸಾಕಷ್ಟು ಧಾರಾವಾಹಿ, ಸಿನಿಮಾಗಳಲ್ಲಿಯೂ ಮಾನಸಿ ಬಣ್ಣಹಚ್ಚಿದ್ದಾರೆ. ರಿಷಬ್ ಶೆಟ್ಟಿ ನಿರ್ದೇಶನದ ಕನ್ನಡ ಸೂಪರ್ ಹಿಟ್ ಸಿನಿಮಾ ಕಾಂತಾರದಲ್ಲಿ ನಾಯಕನ ತಾಯಿ ಕಮಲಾ ಪಾತ್ರ ಹೆಚ್ಚು ಪ್ರಖ್ಯಾತಿಯನ್ನು ತಂದುಕೊಟ್ಟಿತ್ತು. 2011 ರಲ್ಲಿ ಕಂಚಿಲ್ದ ಬಾಲೆ ಸಿನಿಮಾದ ಮೂಲಕ ತುಳು ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಮಾನಸಿ ಅವರು ನಟನೆಯ ನೇರಳು ಕಿರುಚಿತ್ರಕ್ಕೆ 2018ರಲ್ಲಿ ನಡೆದ ಬೆಂಗಳೂರು ಅಂತರಾಷ್ಟ್ರೀಯ ಕಿರು ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಮಹಾಭಾರತ, ಗುರುರಾಘವೇಂದ್ರ ವೈಭವ, ಸೀತೆ, ಪ್ರೀತಿಯೆಂಬ ಮಾಯೆ ಧಾರವಾಹಿಗಳಲ್ಲಿಯೂ ಬಣ್ಣ ಹಚ್ಚಿದ್ದಾರೆ. 2013 ರಲ್ಲಿ ಮಾನಸಿ ಸುಧೀರ್ ಹೆಸರಲ್ಲಿ ಯೂಟೂಬ್ ಚಾನೆಲ್ ಆರಂಭಿಸಿರುವ ಮಾನಸಿ ಅವರು ತಮ್ಮ ಹಾಡು, ನೃತ್ಯದ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ. ಈಗಾಗಲೇ ಲಕ್ಷಕ್ಕೂ ಅಧಿಕ ಚಂದಾದಾರನ್ನು ಹೊಂದಿದ್ದಾರೆ.
ಮಾನಸಿ ಸುಧೀರ್ ಅವರ ಹಾಡು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ : ವಿದುಷಿ ಮಾನಸಿ, ಮಗಳು ಸುರಭಿ ಧ್ವನಿಯಲ್ಲಿ ಮೊಬೈಲ್ ಮೈಥಿಲಿ : ಕನ್ನಡಿಗರ ಮನಗೆದ್ದಿದೆ ಪುಟಾಣಿ ಲೇಖಕಿಯ ಆಡಿಯೋ ಬುಕ್
ಇದನ್ನೂ ಓದಿ : Manasi Sudhir : “ಕುಂತ್ರ ನಿಂತ್ರ ಅವಂದೇ ಧ್ಯಾನ” ಅನ್ನುತ್ತಾ ಮತ್ತೆ ಬಂದರು ಮಾನಸಿ… ಇದು ಏನೀ ಅದ್ಬುತವೇ !
Kantara Manasi Sudhir came again with Special concept spoke about the importance of the Constitution