ಹಿಂದಿ ಭಾಷೆಯ ಹೇರಿಕೆಯ ವಿರುದ್ಧ ನಡೆಯುತ್ತಿರುವ ಹೋರಾಟ ನಿನ್ನೆ ಮೊನ್ನೆಯದ್ದಲ್ಲ. ಈ ನಡುವೆ ಈಗಾಗಲೇ ಸಾಕಷ್ಟು ಚರ್ಚೆಗಳು, ವಾದ – ವಿವಾದಗಳು ನಡೆದು ಹೋಗಿವೆ. ಆದರೆ ಇದೀಗ ನಟ ಕಿಚ್ಚ ಸುದೀಪ ಹಾಗೂ ಅಜಯ್ ದೇವಗನ್ (kichcha sudeep vs ajay devgn) ಈ ಚರ್ಚೆಯನ್ನು ಮತ್ತೊಮ್ಮೆ ಹುಟ್ಟು ಹಾಕಿದ್ದಾರೆ. ಇಬ್ಬರ ನಡುವೆ ಶುರುವಾದ ಟ್ವೀಟ್ ವಾರ್ ಇದೀಗ ರಾಷ್ಟ್ರ ಮಟ್ಟದಲ್ಲಿ ಹೊಸದೊಂದು ಚರ್ಚೆಯನ್ನು ಹುಟ್ಟು ಹಾಕಿದೆ. ನಟ ಕಿಚ್ಚ ಸುದೀಪರಿಗೆ ಮಾಜಿ ಸಿಎಂ ಸಿದ್ದರಾಮಯ್ಯ, ನಟಿ ರಮ್ಯಾ ಸೇರಿದಂತೆ ಅನೇಕರು ತಮ್ಮ ಸಾಥ್ ನೀಡಿದ್ದಾರೆ.
ವಿವಾದ ಶುರುವಾಗಿದ್ದು ಹೇಗೆ..?
ನಟ ಉಪೇಂದ್ರ ಹಾಗೂ ರಾಮ್ ಗೋಪಾಲ್ ವರ್ಮಾ ಕಾಂಬಿನೇಷನ್ನಲ್ಲಿ ಮೂಡಿ ಬರುತ್ತಿರುವ ಐ ಆ್ಯಂ ಆರ್ ಸಿನಿಮಾದ ಟ್ರೇಲರ್ ಹಾಗೂ ಫಸ್ಟ್ ಲುಕ್ ಲಾಂಚ್ ಕಾರ್ಯಕ್ರಮಕ್ಕೆ ನಟ ಸುದೀಪ ಕೂಡ ತೆರಳಿದ್ದರು. ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ಸುದೀಪ್ ಪ್ಯಾನ್ ಇಂಡಿಯಾ ಸಿನಿಮಾಗಳ ಬಗ್ಗೆ ಮಾತನಾಡುವಾಗ ಕನ್ನಡ ಸಿನಿಮಾಗಳು ಹಿಂದಿಗೆ ಡಬ್ ಆದ ಕೂಡ ಅದನ್ನು ಪ್ಯಾನ್ ಇಂಡಿಯಾ ಸಿನಿಮಾ ಎನ್ನಬೇಡಿ. ಹಿಂದಿ ನಮ್ಮ ರಾಷ್ಟ್ರ ಭಾಷೆ ಅಲ್ಲ. ನಿಜ ಹೇಳಬೇಕು ಅಂದರೆ ಹಿಂದಿಯವರೇ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ನಿರ್ಮಿಸುತ್ತಿದ್ದಾರೆ ಎಂದು ಹೇಳಿದ್ದರು.
ಸುದೀಪ್ ಹಿಂದಿ ರಾಷ್ಟ್ರ ಭಾಷೆಯಲ್ಲ ಎಂದು ಹೇಳಿದ್ದನ್ನೇ ದೊಡ್ಡ ವಿಚಾರ ಎಂಬಂತೆ ಬಿಂಬಿಸಿದ ನಟ ಅಜಯ್ ದೇವಗನ್ ಟ್ವೀಟ್ನಲ್ಲಿ, ನನ್ನ ಸಹೋದರ ಕಿಚ್ಚ ಸುದೀಪ, ಹಿಂದಿ ನಿಮ್ಮ ರಾಷ್ಟ್ರ ಭಾಷೆ ಅಲ್ಲ ಎಂದಮೇಲೆ ನೀವೇಕೆ ನಿಮ್ಮ ಭಾಷೆಯ ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಿ ರಿಲೀಸ್ ಮಾಡುತ್ತೀರಿ..? ನಮ್ಮ ಮಾತೃಭಾಷೆಯಾದ ಹಿಂದಿಯು ಈ ಹಿಂದೆಯೂ ರಾಷ್ಟ್ರ ಭಾಷೆಯಾಗಿತ್ತು. ಮುಂದೆಯೂ ರಾಷ್ಟ್ರ ಭಾಷೆಯಾಗಿ ಇರಲಿದೆ ಎಂದು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಕಿಚ್ಚ ಸುದೀಪ, ಅಜಯ್ ದೇವಗನ್ ಸರ್, ನಾನು ಹೇಳಿದ್ದನ್ನು ನೀವು ಬೇರೆ ರೀತಿಯಲ್ಲೇ ಅರ್ಥ ಮಾಡಿಕೊಂಡಿದ್ದೀರಿ. ನಾನು ನಿಮ್ಮನ್ನು ಖುದ್ದಾಗಿ ಭೇಟಿಯಾಗಿ ಈ ಬಗ್ಗೆ ವಿವರಣೆ ನೀಡುತ್ತೇನೆ ಎಂದು ಟ್ವೀಟಾಯಿಸಿದ್ದರು. ಆದರೆ ಇಲ್ಲಿಗೆ ಸುಮ್ಮನಾಗದ ಕಿಚ್ಚ ಸುದೀಪ ಮತ್ತೊಂದು ಟ್ವೀಟ್ ಮಾಡಿ, ಇನ್ನೊಂದು ಮಾತು ಅಜಯ್ ದೇವಗನ್ ಸರ್, ನೀವು ಹಿಂದಿಯಲ್ಲಿ ಮಾಡಿದ ಟ್ವೀಟ್ ನನಗೆ ಅರ್ಥವಾಯಿತು. ನಾವು ಹಿಂದಿಯನ್ನು ಪ್ರೀತಿಸುತ್ತೇವೆ, ಗೌರವಿಸುತ್ತೇವೆ , ನಾವು ಹಿಂದಿಯನ್ನು ಕಲಿತಿದ್ದೇವೆ. ಆದರೆ ಇದೇ ಟ್ವೀಟ್ನ್ನು ನಾನು ಕನ್ನಡದಲ್ಲಿಯೇ ಮಾಡುತ್ತಿದ್ದರೆ ನಿಮ್ಮ ಪರಿಸ್ಥಿತಿ ಏನಾಗುತ್ತಿತ್ತು…? ನಾವೂ ಭಾರತಕ್ಕೆ ಸೇರಿದವರೇ ಅಲ್ಲವೇ ಸರ್..? ಎಂದು ಪ್ರಶ್ನಿಸಿದ್ದರು.
ಈ ಟ್ವೀಟ್ ಸರಣಿಗೆ ಅಂತ್ಯ ಹಾಡಲು ಮುಂದಾದ ಅಜಯ್ ದೇವಗನ್, ತಪ್ಪು ತಿಳುವಳಿಕೆಯ ವಿಷಯವನ್ನು ತಿಳಿಗೊಳಿಸಿದ್ದಕ್ಕೆ ಧನ್ಯವಾದಗಳು ಸುದೀಪ್, ಚಿತ್ರರಂಗ ಅಂದಮೇಲೆ ನಾವೆಲ್ಲರೂ ಒಂದು. ನಾವು ಎಲ್ಲಾ ಭಾಷೆಗಳನ್ನೂ ಗೌರವಿಸುತ್ತೇವೆ. ಅನುವಾದದಲ್ಲಿ ಏನೋ ತಪ್ಪಾಗಿ ಈ ರೀತಿ ಆಗಿರಬಹುದು ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನು ಓದಿ : kichcha sudeep : ಅಜಯ್ ದೇವಗನ್- ಕಿಚ್ಚ ಸುದೀಪ್ ಹಿಂದಿ ವಾರ್..! ನಾವೂ ಭಾರತೀಯರಲ್ಲವೇ ಎಂದ ಅಭಿನಯ ಚಕ್ರವರ್ತಿ
ಇದನ್ನೂ ಓದಿ : Thanjavur : ತೇರು ಎಳೆಯುವ ವೇಳೆಯಲ್ಲಿ ವಿದ್ಯುತ್ ಅವಘಡ : 11 ಮಂದಿ ದುರ್ಮರಣ
kichcha sudeep vs ajay devgn this is how controversy about hindi and national language controversy started