ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಸುದೀಪ್ ತಮ್ಮ ನಟನೆ ಮಾತ್ರವಲ್ಲ ಮಾನವೀಯತೆ ಹಾಗೂ ಸಾಮಾಜಿಕ ಕೆಲಸಗಳಿಂದಲೂ ಜನಮನ್ನಣೆ ಗಳಿಸಿದ್ದಾರೆ. ನಟನೆ,ಕ್ರಿಕೆಟ್, ನಿರೂಪಣೆ , ಬಿಗ್ ಬಾಸ್ ಹೀಗೆ ಸಖತ್ ಬ್ಯುಸಿ ಶೆಡ್ಯೂಲ್ ನಲ್ಲೂ ಸುದೀಪ್ ಜನರ ಕಷ್ಟಕ್ಕೆ ಸ್ಪಂದಿಸೋದನ್ನು ಮರೆಯೋದಿಲ್ಲ. ಈಗ ಮತ್ತೊಮ್ಮೆ ತಮ್ಮ ಸಾಮಾಜಿಕ ಕಾರ್ಯದ ಮೂಲಕ ಸುದ್ದಿಯಾಗಿದ್ದು ಅಶಕ್ತರಿಗಾಗಿ ನಮ್ಮನೆ ಮದುವೆ (Kiccha Sudeep Nammane Maduve) ಮೂಲಕ ನೆರವಾಗಲು ಸಿದ್ಧವಾಗಿದ್ದಾರೆ.
ನಟ ಸುದೀಪ್ ತಮ್ಮ ಸಾಮಾಜಿಕ ಕಾರ್ಯಗಳಿಗಾಗಿ ಕಟ್ಟಿದ ಸುದೀಪ್ ಚ್ಯಾರಿಟೇಬಲ್ ಟ್ರಸ್ಟ್ ಗೆ ಈಗ ಐದು ವರ್ಷದ ಸಂಭ್ರಮ. ತಮ್ಮ ಟ್ರಸ್ಟ್ ಗೆ ಐದು ವರ್ಷವಾಗಿರೋ ನೆನಪಿಗಾಗಿ ಚ್ಯಾರಿಟೇಬಲ್ ಟ್ರಸ್ಟ್ ವತಿಯಿಂದ ನಮ್ಮನೆ ಮದುವೆ ಹೆಸರಿನಲ್ಲಿ ಸಾಮೂಹಿಕ ವಿವಾಹಕ್ಕೆ ನಿರ್ಧರಿಸಿದ್ದಾರೆ ಸುದೀಪ್. ಐದು ಆರ್ಥಿಕವಾಗಿ ಆಶಕ್ತರಾಗಿರುವ ಜೋಡಿಗಳಿಗೆ ಸರಳವಾಗಿ ಮದುವೆ ಮಾಡಿಸಲು ಸುದೀಪ್ ಚ್ಯಾರಿಟೇಬಲ್ ಟ್ರಸ್ಟ್ ನಿರ್ಧರಿಸಿದೆ. ಇದಕ್ಕಾಗಿ ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.
ಬಂದ ಅರ್ಜಿಗಳನ್ನು ಪರಿಶೀಲಿಸಿ ಐದು ಯೋಗ್ಯ ಜೋಡಿಗಳಿಗೆ ಸುದೀಪ್ ಟ್ರಸ್ಟ್ ಸರಳವಾಗಿ ಯಾವುದೇ ಆಡಂಬರವಿಲ್ಲದೇ ಮದುವೆ ಮಾಡಿಸಲಿದೆ. ಜನವರಿ ೨ ರೊಳಗೆ ಆಸಕ್ತರು ಅರ್ಜಿ ಸಲ್ಲಿಸಲಬಹುದಾಗಿದ್ದು , ಹೆಚ್ಚಿನ ಮಾಹಿತಿಗೆ ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ ನ ಫೇಸ್ ಬುಕ್ ನಲ್ಲಿ ಲಭ್ಯವಿದೆ. ಮದುವೆಗೆ ಸಲ್ಲಿಸಲಾದ ಅರ್ಜಿಗಳನ್ನು ಹಾಗೂ ದಾಖಲೆಗಳನ್ನು ಪರಿಶೀಲಿಸಿ ಫೆ.೧೪ ರಂದು ಕಿಚ್ಚ ಟ್ರಸ್ಟ್ ನಿಂದ ವಿವಾಹ ಆಯೋಜಿಸಲಾಗುತ್ತದೆ. ಆದರೆ ಇದಕ್ಕಾಗಿ ಯಾರಿಂದಲೂ ಯಾವುದೇ ಆರ್ಥಿಕ ಸಹಾಯವನ್ನು ಟ್ರಸ್ಟ್ ಪಡೆಯುವುದಿಲ್ಲ ಎಂದು ಟ್ರಸ್ಟ್ ಸ್ಪಷ್ಟಪಡಿಸಿದೆ.
ಕೇವಲ ಮದುವೆ ಮಾತ್ರವಲ್ಲದೇ ಕಿಚ್ಚ ಸುದೀಪ್ ಟ್ರಸ್ಟ್ ತಮ್ಮ ಐದನೇ ವರ್ಷಾಚರಣೆಯ ಸಂದರ್ಭದಲ್ಲಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಸುದೀಪ್ ಅಭಿಮಾನಿಗಳಿಗಾಗಿ ಟ್ರಸ್ಟ್ ಔತಣಕೂಟವನ್ನು ಆಯೋಜಿಸಲು ನಿರ್ಧರಿಸಿದೆ. ಇದೇ ಮೊದಲಲ್ಲ ಇದಕ್ಕೂ ಮುನ್ನವೂ ಸುದೀಪ್ ಹಲವು ಅಶಕ್ತರಿಗೆ ಸಹಾಯ ಮಾಡಿದ್ದು ನಾಲ್ಕಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿದ್ದಾರೆ. ಅಲ್ಲದೇ ಕೊರೋನಾ ಸಂದರ್ಭದಲ್ಲಿ ಅಶಕ್ತರಿಗೆ, ಸ್ಯಾಂಡಲ್ ವುಡ್ ನ ಹಿರಿಯ ಕಲಾವಿದರಿಗೆ ಸಹಾಯಧನ ನೀಡಿದ್ದರು.
ಶಾಲಾಮಕ್ಕಳಿಗೆ ಶೂ ಸೇರಿದಂತೆ ಹಲವು ಅವಶ್ಯಕ ವಸ್ತುಗಳನ್ನು ಸುದೀಪ್ ಪ್ರತಿವರ್ಷ ತಮ್ಮ ಟ್ರಸ್ಟ್ ವತಿಯಿಂದ ವಿತರಣೆ ಮಾಡುತ್ತಾರೆ. ಅಲ್ಲದೇ ತಮ್ಮ ಟ್ರಸ್ಟ್ ವತಿಯಿಂದ ವೃದ್ಧಾಶ್ರಮ ನಡೆಸಲು ಸುದೀಪ್ ಸಿದ್ಧತೆ ನಡೆಸಿದ್ದಾರೆ.
ಇದನ್ನೂಓದಿ : ರಶ್ಮಿಕಾ ಮಂದಣ್ಣ ಫ್ಯಾನ್ಸ್ ಗೆ ಸಿಹಿಸುದ್ದಿ: ಇನ್ ಸ್ಟಾದಲ್ಲಿ 2.5 ಕೋಟಿ ದಾಟಿದ ಫಾಲೋವರ್ಸ್
ಇದನ್ನೂ ಓದಿ : ಲವ್ ಯೂ ರಚ್ಚುಗೆ ನೂರೆಂಟು ವಿಘ್ನ : ಇದೀಗ ಬಂದ್ ಸಂಕಷ್ಟ
( Kichcha Sudeepa Charitable Society Organizing Kiccha Sudeep Nammane Maduve)