ಏನೀ ಅದ್ಬುತವೇ… ಈ ಹಾಡನ್ನು ಸದ್ಯ ಕೇಳದವರು ವಿರಳಾತಿವಿರಳ. ವಿಭಿನ್ನ ಭಾವಾಭಿನಯದ ಮೂಲಕ ಎಲ್ಲರನ್ನ ತನ್ನತ್ತ ಸೆಳೆದಿದ್ದ ಕರಾವಳಿಯ ಗಾನಕೋಗಿಲೆ ಮಾನಸಿ ಸುಧೀರ್ (Manasi Sudhir) ಇದೀಗ ಹಾಡಿರುವ ಕುಂತ್ರ ನಿಂತ್ರ ಅವಂದೇ ಧ್ಯಾನ ಹಾಡು ಸೋಶೀಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದೆ.
ಉಡುಪಿ ಜಿಲ್ಲೆಯ ಕೊಡವೂರಿನ ಮಾನಸಿ ಸುಧೀರ್ ಕರಾವಳಿಯ ಪ್ರತಿಭಾನ್ವಿತ ಕಲಾವಿದೆ. ಸಂಗೀತ, ಅಭಿನಯ, ನೃತ್ಯ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಿರುವ ಮಾನಸಿ ಸುಧೀರ್ ಸದ್ಯ ಸಾಮಾಜಿಕ ಜಾಲತಾಣದ ಮೂಲಕ ಎಲ್ಲರ ಹಾಟ್ ಫೇವರೇಟ್ ಆಗಿದ್ದಾರೆ. ಭಾವಗೀತೆಗಳಿಗೆ ಭಾವನೆಯನ್ನು ತುಂಬಿ ಭಿನ್ನ ವಿಭಿನ್ನ ರಾಗ ಸಂಯೋಜನೆ ಮೂಲಕ ಸೂಜಿಗಲ್ಲಿನಂತೆ ಎಲ್ಲರನ್ನು ತನ್ನತ್ತ ಸೆಳೆಯುತ್ತಿದ್ದಾರೆ ಮಾನಸಿ.

ಪದ್ಯಗಳಿಗೆ ಭಾವ ತುಂಬಿ ಅಭಿನಯದ ಮೂಲಕವೇ ನೋಡುಗರ ಮನಸೆಳೆದ ಮಾನಸಿ ಅವರು ಹಾಡಿದ ಏನೀ ಅದ್ಬುತವೇ ಹಾಡು ಎಲ್ಲರ ಬಾಯಲ್ಲೂ ಗುನುಗುತ್ತಿದೆ. ಡುಂಡಿರಾಜ್ ಅವರ ಗಣ್ಯರಾಜ್ಯದ ಗುಣಗಾನ, ತಿರುಮಲೇಶ್ ಅವರ ಎಲ್ಲಿಗೆ ಹೋಗೋಣ, ಬಿ.ಆರ್. ಲಕ್ಷಣರಾವ್ ಅವರ ಹೇಗಿದ್ದೀಯೇ ಟ್ವಿಂಕಲ್ ಹಾಡು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಅದ್ರಲ್ಲೂ ಗುರುರಾಜ್ ಮಾರ್ಪಳ್ಳಿ ಅವರ ರಾಗಸಂಯೋಜನೆಯಲ್ಲಿ ಮೂಡಿಬಂದ ಏನೀ ಅದ್ಬುತವೇ ಹಾಡು ನಿಜಕ್ಕೂ ಅದ್ಬುತವೊಂದನ್ನು ಸೃಷ್ಟಿಸಿದೆ.
ಲಾಕ್ ಡೌನ್ ಬಿಡುವಿನ ಸಮಯದಲ್ಲಿ ಮನೆಯಲ್ಲಿದ್ದ ಮಾನಸಿ ಅವರಿಗೆ ಹೊಸತನದ ತುಡಿತ ಇಂದು ಭಾವಗೀತೆಗಳಿಗೆ ಹೊಸ ಮೆರುಗನ್ನು ನೀಡಿದೆ. ಇದೀಗ ಕಳೆದೊಂದು ವಾರದಿಂದಲೂ ಕೊಡವೂರಿನ ಹಳೆಯ ಕಾಲದ ಸುಂದರ ಮನೆಯಲ್ಲಿ ಒತ್ತಾರೆ ಮಾಡುತ್ತಾ, ಮನೆಮಂದಿಯೊಂದಿಗೆ ಆಟವಾಡುತ್ತಾ ಕಾಲ ಕಳೆಯುತ್ತಿದ್ದ ನನಗೆ ಪತಿರಾಯರೇ ಈ ಹಾಡನ್ನು ನೆನಪಿಸಿದರು ಅಂತಾ ಹೇಳುತ್ತಾ ಕುಂತ್ರ ನಿಂತ್ರ ಅವಂದೇ ಧ್ಯಾನ ಅಂತಾ ಹಾಡಿದ್ದಾರೆ.

ಉಡುಪಿಯಲ್ಲಿ ಜನಿಸಿದ ಮಾನಸಿ ಬ್ರಹ್ಮಾವರ ಕ್ರಾಸ್ ಲ್ಯಾಂಡ್ ಕಾಲೇಜಿನ ಪದವಿ ವಿದ್ಯಾಭ್ಯಾಸವನ್ನು ಪೂರೈಸಿದ್ದಾರೆ. ಬಾಲ್ಯದ ದಿನಗಳಿಂದಲೇ ಕಲೆಯ ಬಗ್ಗೆ ಅಪಾರವಾದ ಆಸಕ್ತಿಯನ್ನು ಹೊಂದಿದ್ದ ಮಾನಸಿ ಕೇವಲ ಹಾಡುಗಾರ್ತಿ ಮಾತ್ರವಲ್ಲ ಅದ್ಬುತ ಭರತನಾಟ್ಯ ಕಲಾವಿದೆಯೂ ಹೌದು.

ವಿದ್ವಾನ್ ಸುಧೀರ್ ರಾವ್ ಕೊಡವೂರು ಅವರನ್ನು ವಿವಾಹವಾಗಿರುವ ಮಾನಸಿ ಸುಧೀರ್ ಈಗಾಗಲೇ ಕನ್ನಡ ಚಲನಚಿತ್ರಗಳಲ್ಲಿಯೂ ನಟಿಸಿ ತಾನು ಪ್ರತಿಭಾನ್ವಿತ ಕಲಾವಿದೆ ಅನ್ನೋದನ್ನು ಈಗಾಗಲೇ ನಿರೂಪಿಸಿದ್ದಾರೆ. ಕನ್ನಡ ಮಾತ್ರವಲ್ಲ ತುಳು ಸಿನಿಮಾ ಹಾಗೂ ಭಕ್ತಿ ಪ್ರಧಾನವಾಗಿರುವ ಧಾರವಾಹಿಗಳಲ್ಲಿಯೂ ನಟಿಸಿದ್ದಾರೆ ಮಾನಸಿ ಸುಧೀರ್.

ಸದಾ ಹೊಸತನಕ್ಕೆ ತುಡಿಯುವ ಮಾನಸಿ, ಈಗಾಗಲೇ ಪತಿ ವಿದ್ವಾನ್ ಸುಧೀರ್ ರಾವ್ ಕೊಡವೂರು ಅವರೊಂದಿಗೆ ನೃತ್ಯ ಶಾಲೆಯೊಂದನ್ನು ನಡೆಸುತ್ತಿದ್ದಾರೆ. ಈ ಮೂಲಕ ತಾವು ಕಲಿತ ಕಲೆಯನ್ನು ಇತರರಿಗೂ ಧಾರೆಯೆರೆಯುವ ಕಾಯಕವನ್ನೂ ಮಾಡುತ್ತಿದ್ದಾರೆ.

ಮಾನಸಿ ಸುಧೀರ್ (Manasi Sudhir) ಅವರ ಕಲಾ ಬದುಕು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ. ಭಾವಗೀತೆಗಳಿಗೆ ಇನ್ನಷ್ಟು ಜೀವ ತುಂಬಿ ಕನ್ನಡದ ಕಂಪನ್ನು ವಿಶ್ವದೆಲ್ಲೆಡೆ ಪಸರಿಸಲಿ.