ಸ್ಯಾಂಡಲ್‌ವುಡ್ ನಟ ಪುನಿತ್ ರಾಜ್ ಕುಮಾರ್ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ತಂದೆ ಹಾಕಿಕೊಟ್ಟ ಹಾದಿಯಲ್ಲಿಯೇ ಸಾಗಿದ ಪುನಿತ್ ರಾಜ್ ಕುಮಾರ್ ಡಾ.ರಾಜ್ ಕುಮಾರ್ ಅವರಂತೆಯೇ ನೇತ್ರದಾನ ಮಾಡುವ ಮೂಲಕ ಸಾವಿನಲ್ಲಿ ಸಾರ್ಥಕತೆಯನ್ನು ಮೆರೆದಿದ್ದಾರೆ.
ಹೃದಯಾಘಾತದಿಂದ ವಿಧಿವಶರಾಗಿರುವ ಪುನಿತ್ ರಾಜ್ ಕುಮಾರ್ ಅವರು ತಾವು ನೇತ್ರದಾನವನ್ನು ಮಾಡಿದ್ದರು. ಈ ಹಿಂದೆ ಡಾ.ರಾಜ್ ಕುಮಾರ್ ಅವರು ಕೂಡ ತಮ್ಮ ಸಾವಿಗೂ ಮೊದಲೇ ನೇತ್ರದಾನ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದರು. ಅಂತೆಯೇ ಪುನಿತ್ ರಾಜ್ ಕುಮಾರ್ ಕೂಡ ನೇತ್ರದಾನ ಮಾಡಿದ್ದರು.

ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದ ವೇಳೆಯಲ್ಲಿ ಪುನಿತ್ ರಾಜ್ ಕುಮಾರ್ ಅವರಿಗೆ ಹೃದಯಾಘಾತ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ವಿಕ್ರಂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಲಕ್ಷಾಂತರ ಅಭಿಮಾನಿಗಳ ಹರಿಕೆ, ವೈದ್ಯರ ಶ್ರಮ ಕೊನೆಗೂ ಫಲಕೊಡಲಿಲ್ಲ. ಅಪ್ಪು ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದ ಪುನಿತ್ ರಾಜ್ ಕುಮಾರ್ ಅವರು, ಎಲ್ಲರಿಂದಲೂ ಅಪ್ಪು ಎಂದೇ ಕರೆಯಿಸಿಕೊಳ್ಳುತ್ತಿದ್ದರು.

ಕನ್ನಡ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದ ಪುನಿತ್ ರಾಜ್ ಕುಮಾರ್ ಯಾವುದೇ ವಿವಾದಕ್ಕೆ ಸಿಲುಕದೆ, ತಂದೆಯ ಹಾದಿಯಲ್ಲಿಯೇ ಸಾಗಿದವರು. ಸಾಮಾಜಿಕ ಸೇವೆಯಲ್ಲಿ ತನ್ನನ್ನ ತೊಡಗಿಸಿಕೊಂಡಿದ್ದರೂ ಕೂಡ ತಾವು ಮಾಡಿದ ಸಹಾಯವನ್ನು ಎಲ್ಲಿಯೂ ಹೇಳಿಕೊಂಡವರಲ್ಲ. ಬಡವರ ಕಣ್ಣೀರಿಗೆ ಧ್ವನಿಯಾಗುತ್ತಿದ್ದ ಅಪ್ಪು ಇಂದು ನಮ್ಮೊಂದಿಗಿಲ್ಲ. ಅಪ್ಪು ಅಪಾರ ಅಭಿಮಾನಿಗಳು ಇಂದು ಕಣ್ಣೀರು ಸುರಿಸುತ್ತಿದ್ದಾರೆ. ತಮ್ಮ ನೆಚ್ಚಿನ ನಟ ಸಾವನ್ನು ಅಭಿಮಾನಿಗಳಿಂದ ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ.
ಇದನ್ನೂ ಓದಿ : ಪುನಿತ್ ಮನೆಗೆ ಬಿಗಿ ಭದ್ರತೆ, ಸೈಂಟ್ ಆನ್ಸ್ ಶಾಲೆಗೆ ರಜೆ ಘೋಷಣೆ : ಆಸ್ಪತ್ರೆಗೆ ಸಿಎಂ ಬೊಮ್ಮಾಯಿ ಭೇಟಿ
ಇದನ್ನೂ ಓದಿ : ಬಾರದ ಲೋಕಕ್ಕೆ ಪಯಣಿಸಿದ ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್