ಕೊರೋನಾ ಕರಿನೆರಳಿನ ನಡುವೆಯೂ ಸ್ಯಾಂಡಲ್ ವುಡ್ ನಲ್ಲಿ ಒಂದಿಷ್ಟು ಹೊಸ ಬಗೆಯ ಚಿಂತನೆಗಳು ಸಿನಿಮಾ ರೂಪದಲ್ಲಿ ತೆರೆಗೆ ಬರಲು ಸಿದ್ಧವಾಗುತ್ತಿದೆ. ಈ ಪೈಕಿ ಒನ್ ಲವ್ ಟೂ ಸ್ಟೋರಿ ಮೂಲಕ ಭರವಸೆ ಮೂಡಿಸಿದ್ದ ನಿರ್ದೇಶಕ ವಸಿಷ್ಠ ಬಂಟನೂರು ತಮ್ಮ ಎರಡನೇ ಚಿತ್ರ ನಿರ್ದೇಶನಕ್ಕೆ ಸಿದ್ಧವಾಗಿದ್ದು, ಸಿನಿಮಾಗೆ 1975 ಎಂದು ಹೆಸರಿಡಲಾಗಿದೆ.
ಗೌರಿ-ಗಣೇಶ ಹಬ್ಬದ ಸಂಭ್ರಮದಲ್ಲೇ 1975’ ಎಂಬ ಚಿತ್ರದ ಮುಹೂರ್ತ ಸಮಾರಂಭ ಸರಳವಾಗಿ, ಅರ್ಥವತ್ತಾಗಿ ನೆರವೇರಿದೆ.ಹಲವಾರು ಕೌತುಕಗಳನ್ನು ತನ್ನೊಳಗೆ ಬಚ್ಚಿಟ್ಟು ಕೊಂಡಿರುವ ಮರ್ಡರ್ ಮಿಸ್ಟ್ರಿಯ ಹಾದಿ ಹಿಡಿದಿರುವ ವಸಿಷ್ಟ,ಕೊರೋನಾ ಕಾಲಘಟ್ಟದಲ್ಲಿಯೇ ಅಚ್ಚುಕಟ್ಟಾದ ಕತೆ ಸಿದ್ಧಪಡಿಸಿಕೊಂಡಿದ್ದಾರಂತೆ.

1975ಕ್ಕೆ ಮುಹೂರ್ತವನ್ನೂ ಮುಗಿಸಿರುವ ವಸಿಷ್ಟ ಕಥೆ, ಚಿತ್ರಕಥೆ ಮತ್ತು ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ. ಮುಂದಿನ ತಿಂಗಳಿಂದಲೇ ಚಿತ್ರೀಕರಣ ಆರಂಭ ವಾಗಲಿದೆ. ಕಥೆಯ ಬಗ್ಗೆ ಯಾವ ಸುಳಿವನ್ನೂ ಬಿಟ್ಟುಕೊಡದಂತೆ ವಸಿಷ್ಟ ಬಂಟನೂರು ಎಚ್ಚರ ವಹಿಸಿದ್ದರೂ ಇದು ಸ್ಕೂಟರ್ ಒಂದರ ಸುತ್ತ ಸುತ್ತುವ ಕತೆ ಎಂಬ ಒಂದು ಕ್ಲೂ ಬಿಟ್ಟುಕೊಟ್ಟಿದ್ದಾರೆ.

ಇನ್ನುಳಿದಂತೆ ಜೆಮ್ ಶೆಟ್ಟಿ ಈ ಚಿತ್ರದ ನಾಯಕ. ಪ್ರತಿಭಾನ್ವಿತ ನಟಿ ಆರೋಹಿ ನಾಯಕಿ.ಇಂಥಾದ್ದೊಂದು ವಿಭಿನ್ನ ಕಥೆಯನ್ನು ಬಹುವಾಗಿ ಮೆಚ್ಚಿಕೊಂಡು ದಿನೇಶ್ ರಾಜನ್ ಬಂಡವಾಳ ಹೂಡುತ್ತಿದ್ದಾರೆ. ಸಿಲ್ವರ್ ಸ್ಕ್ರೀನ್ಸ್ ಫಿಲಂ ಫ್ಯಾಕ್ಟರಿ ಬ್ಯಾನರಿನಡಿಯಲ್ಲಿ ಈ ಚಿತ್ರ ನಿರ್ಮಾಣಗೊಳ್ಳಲಿದೆ. ಈಗಾಗಲೇ ನಿರ್ದೇಶಕರು ಚಿತ್ರತಂಡದೊಡಗೂಡಿ ಲೊಕೇಶನ್ ಅನ್ನೂ ಕೂಡಾ ಪಕ್ಕಾ ಮಾಡಿಕೊಂಡಿದ್ದಾರೆ. ಬೆಂಗಳೂರು, ಬೀದರ್, ಮಂಗಳೂರು ಮುಂತಾದೆಡೆಗಳಲ್ಲಿ ಚಿತ್ರೀಕರಣ ನಡೆಯಲಿದೆ. ಸದ್ಯ ಪಾತ್ರವರ್ಗ ಮತ್ತು ತಾಂತ್ರಿಕ ವರ್ಗದ ಆಯ್ಕೆ ಕಾರ್ಯ ಭರದಿಂದ ಸಾಗುತ್ತಿಗೆ. ಇನ್ನು ಮುಂದೆ ಹಂತ ಹಂತವಾಗಿ 1975ರ ಒಂದೊಂದೇ ಮಾಹಿತಿಗಳು ಪ್ರೇಕ್ಷಕರನ್ನು ಹಂತ ಹಂತವಾಗಿ ತಲುಪಲಿದೆ.
(Sandalwood new Movie 1975 muhurtha )