ಚಂದನವನದಲ್ಲೀಗ ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ಸಿದ್ದವಾಗಿವೆ. ದಸರಾ ಹೊತ್ತಲ್ಲೇ ಬಹು ಬಜೆಟ್ ಸಿನಿಮಾಗಳು ತೆರೆಗೆ ಬರುತ್ತಿದೆ. ಇದೀಗ ನೆನಪಿರಲಿ ಪ್ರೇಮ್ ಕೂಡ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಪ್ರೇಮ್ ಅಭಿನಯದ ಪ್ರೇಮಂ ಪೂಜ್ಯಂ’ ಚಿತ್ರವನ್ನು ಇದೇ ತಿಂಗಳು ಬಿಡುಗಡೆ ಮಾಡಲು ಚಿತ್ರ ತಂಡ ಸಜ್ಜಾಗಿದೆ.
ಪ್ರೇಮ್ ಅಭಿನಯದ ಸಿನಿಮಾಗಳು ಲವ್ ಸೆಂಟಿಮೆಂಟ್ ನಿಂದ ಕೂಡಿರುತ್ತೆ. ನೆನಪಿರಲಿ ಅಂತಾ ಸೂಪರ್ ಹಿಟ್ ಸಿನಿಮಾವನ್ನು ನೀಡಿದ್ದ ಪ್ರೇಮ್, ಇದೀಗ ಪ್ರೇಮಂ ಪೂಜ್ಯಂ’ ಸಿನಿಮಾದ ಮೂಲಕ ನವಿರಾದ ಪ್ರೇಮಕಥೆಯೊಂದರನ್ನು ಪ್ರೇಕ್ಷಕರ ಮುಂದೆ ತೆರೆದಿಡಲು ಸಜ್ಜಾಗಿದ್ದಾರೆ. ಈಗಾಗಲೇ ಈಗಾಗಲೇ ಹಾಡುಗಳಿಂದಲೇ ಸಾಕಷ್ಟು ಸದ್ದು ಮಾಡ್ತಿರುವ ನೆನಪಿರಲಿ ಪ್ರೇಮ್ ಅಭಿನಯದ 25ನೇ ಸಿನಿಮಾ ‘ಪ್ರೇಮಂ ಪೂಜ್ಯಂ’ ಟ್ರೈಲರ್ ಇದೇ ತಿಂಗಳು ಅಕ್ಟೋಬರ್ 14ರಂದು ರಿಲೀಸ್ ಆಗುತ್ತಿದೆ.
ಇದನ್ನೂ ಓದಿ: Bhajarangi 2 : ನಾಯಕಿ ಪೋಸ್ಟರ್ ಬಿಡುಗಡೆ ಮಾಡಿದ ‘ಭಜರಂಗಿ 2’ ಚಿತ್ರ ತಂಡ
ಸ್ವತಃ ಪ್ರೇಮ್ ಅವರೇ ‘ಪ್ರೇಮಂ ಪೂಜ್ಯಂ’ ಚಿತ್ರದ ಕುರಿತು ತಮ್ಮ ಇನ್ ಸ್ಟಾಗ್ರಾಂ ಖಾತೆಯ ಮೂಲಕ ಸಂತಸವನ್ನು ಹಂಚಿಕೊಂಡಿದ್ದಾರೆ. ರಾಘವೇಂದ್ರ ನಿರ್ದೇಶನದಲ್ಲಿ ಮೂಡಿ ಬಂದಿರುವ ಸಿನಿಮಾದಲ್ಲಿ ಒಟ್ಟು 14 ಹಾಡುಗಳಿವೆ. ಈಗಾಗಲೇ 10 ಹಾಡುಗಳು ಯುಟ್ಯೂಬ್ ನಲ್ಲಿ ಬಿಡುಗಡೆಯಾಗಿ ಧೂಳೆಬ್ಬಿಸಿವೆ. ಇತ್ತೀಚಿಗೆ ಬರುತ್ತಿರುವ ಸಿನಿಮಾಗಳ ಪೈಕಿ ಅತೀ ಹೆಚ್ಚು ಹಾಡುಗಳನ್ನು ಹೊಂದಿರುವ ಸಿನಿಮಾ ಅನ್ನೋ ಖ್ಯಾತಿಗೆ ಪ್ರೇಮಂ ಪೂಜ್ಯಂ’ ಪಾತ್ರವಾಗಿದೆ. ಹಾಡುಗಳನ್ನು ಕೇಳಿರುವ ಪ್ರೇಕ್ಷಕ ಸಖತ್ ಖುಷಿಯಾಗಿದ್ದಾರೆ.
ಪ್ರೇಮಂ ಪೂಜ್ಯಂ’ ಸಿನಿಮಾದಲ್ಲಿ ಪ್ರೇಮ್‌ಗೆ ನಾಯಕಿಯರಾಗಿ ಬೃಂದಾ ಆಚಾರ್ಯ ಹಾಗೂ ಐಂದ್ರಿತಾ ರೇ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಹಲವು ಹಿರಿಯ ನಟ, ನಟಿಯರು ಬಣ್ಣ ಹಚ್ಚಿದ್ದಾರೆ. ಕೆದಂಬಾಡಿ ಕ್ರಿಯೇಷನ್ಸ್ ಬ್ಯಾನರ್ ನಡಿ ಸಿನಿಮಾ ನಿರ್ಮಾಣ ಮಾಡಲಾಗಿದೆ. ಪ್ರೇಮಂ ಪೂಜ್ಯಂ’ ಈಗಾಗಲೇ ತೆರೆಗೆ ಬರಲು ಸಿದ್ದವಾಗಿದೆ. ಇದೇ ತಿಂಗಳ ಅಕ್ಟೋಬರ್ 29 ಕ್ಕೆ ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ಇದನ್ನೂ ಓದಿ: ಅನಿತಾ ಭಟ್ ಇಂದಿರಾಗೆ ಜೊತೆಯಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್
ಅಕ್ಟೋಬರ್ ತಿಂಗಳ ಆರಂಭದಲ್ಲೇ ಬಿಡುಗಡೆಯಾಗಿರುವ ನಿನ್ನ ಸನಿಹಕೆ ಸಿನಿಮಾ ಈಗಾಗಲೇ ಪ್ರೇಕ್ಷಕರ ಮನಗೆದ್ದಿದೆ. ಇನ್ನೊಂದೆಡೆಯಲ್ಲಿ ವಿಜಯ ದಶಮಿಯ ದಿನದಂದು ಸುದೀಪ್ ಅಭಿನಯದ ಕೋಟಿಗೊಬ್ಬ -3, ದುನಿಯಾ ವಿಜಯ್ ಅಭಿನಯದ ಸಲಗ ರಿಲೀಸ್ ಆಗುತ್ತಿದೆ. ಅಕ್ಟೋಬರ್ ಅಂತ್ಯದಲ್ಲಿ ಶಿವರಾಜ್ ಕುಮಾರ್ ನಟನೆಯ ಭಜರಂಗಿ -2 ಸಿನಿಮಾ ಕೂಡ ರಿಲೀಸ್ ಆಗುತ್ತಿದೆ. ಇದೀಗ ನೆನಪಿರಲಿ ಪ್ರೇಮ್ ಕೂಡ ಇದೇ ತಿಂಗಳಲ್ಲೇ ತಮ್ಮ ಸಿನಿಮಾ ಬಿಡುಗಡೆ ಸಿದ್ದತೆ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ಚಿತ್ರ ಪ್ರೇಮಿಗಳಿಗಂತೂ ಅಕ್ಟೋಬರ್ ತಿಂಗಳು ಸಿನಿಮಾ ಸುಗ್ಗಿಯೇ ಸರಿ.
(Trailer release date of Premam Poojyam)