ಬೆಂಗಳೂರು : ರಾಜ್ಯದಲ್ಲಿ ಕಳೆದೆಡು ವರ್ಷಗಳಲ್ಲಿ ಶೈಕ್ಷಣಿಕ ಚಟುವಟಿಕೆ ಸರಿಯಾಗಿ ನಡೆದಿಲ್ಲ. ಕೊರೊನಾ ತಗ್ಗಿದ ಬೆನ್ನಲ್ಲೇ ರಾಜ್ಯದಲ್ಲಿ ಕಾಲೇಜುಗಳು ಪುನರಾರಂಭವಾಗಿದ್ರೂ ಆತಂಕ ಕಡಿಮೆಯಾಗಿಲ್ಲ. ಈ ನಡುವಲ್ಲೇ ರಾಜ್ಯದಲ್ಲಿ ಶಾಲೆಗಳು ಯಾವಾಗ ಆರಂಭವಾಗುತ್ತೆ ಅನ್ನೋ ಕುರಿತು ಇಂದು ನಿರ್ಧಾರವಾಗಲಿದೆ.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಇಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಅನ್ಬುಕುಮಾರ್ ಅವರ ಜೊತೆಗೆ ಸಭೆ ನಡೆಸಲಿದ್ದಾರೆ. ರಾಜ್ಯದಲ್ಲಿ ಶಾಲಾರಂಭ ದ ಕುರಿತು ಈಗಾಗಲೇ ತಜ್ಞರ ಸಮಿತಿ ವರದಿಯನ್ನು ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸಲ್ಲಿಕೆಯನ್ನು ಮಾಡಿದೆ. ರಾಜ್ಯದಲ್ಲಿ ಭೌತಿಕ ತರಗತಿಗಳ ಆರಂಭ ಹಾಗೂ ವಿದ್ಯಾಗಮದ ಕುರಿತು ಸಲಹೆಯನ್ನು ನೀಡಿದ್ದಾರೆ. ಅಲ್ಲದೇ ಶಾಲಾರಂಭದಿಂದ ಎದುರಾಗುವ ಸಾಧಕ ಬಾಧಕಗಳ ಕುರಿತು ಕೂಡ ವಿಸ್ತ್ರತವಾಗಿ ವಿವರಿಸಲಾಗಿದೆ.
ತಜ್ಞರ ವರದಿಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶಾಲಾರಂಭವಾಗುತ್ತೆ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ಈ ನಡುವಲ್ಲೇ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚಳ ವಾಗುತ್ತಿದೆ. ಕೇರಳ, ಮಹಾರಾಷ್ಟ್ರದಲ್ಲಿ ಕೊರೊನಾ ಮೂರನೇ ಅಲೆಯ ಆತಂಕ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈ ಬಾರಿಯೂ ಶಾಲೆಗಳು ಭೌತಿಕವಾಗಿ ಆರಂಭ ವಾಗೋದು ಅನುಮಾನ.
ಈಗಾಗಲೇ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಕೊರೊನಾ ವೈರಸ್ ಸೋಂಕು ಹೆಚ್ಚಿತ್ತಿರುವ ಕುರಿತು ಚರ್ಚೆಯನ್ನು ನಡೆಸುತ್ತಿದ್ದಾರೆ. ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾಗಮ ಯೋಜನೆಯನ್ನು ಜಾರಿಗೆ ತರುವ ಸಾಧ್ಯತೆಯಿದೆ.