ಸಾಧನೆಯ ಛಲವೊಂದಿದ್ರೆ, ಯಾವುದೂ ಅಸಾಧ್ಯವಲ್ಲ ಅನ್ನೋದನ್ನು ಕಲಬುರಗಿಯ ಹುಡುಗ ಸೂರ್ಯಕಾಂತ್ ಮಾಡಿ ತೋರಿಸಿದ್ದಾರೆ. ತೊದಲುವಿಕೆಯ ಸಮಸ್ಯೆಯಿಂದ ಮಾತನಾಡಲೂ ಪರದಾಡುತ್ತಿರುವ ಸೂರ್ಯಕಾಂತ್ ಹಾಡಿಗೆ ಇದೀಗ ಕರುನಾಡೇ ಮನಸೋತಿದೆ. ಕಲರ್ಸ್ ಕನ್ನಡ ವಾಹಿನಿಯ ಎದೆತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ನೂರಕ್ಕೆ ನೂರು ಅಂಕ ಪಡೆದು ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಕಲಬುರಗಿ ಜಿಲ್ಲೆಯ ಗಡಿಲಿಂಗನಹಳ್ಳಿ ಅನ್ನೋ ಕುಗ್ರಾಮದ ಹುಡುಗ ಇದೀಗ ಹಾಡಿನ ಮೂಲಕ ಮೋಡಿ ಮಾಡುತ್ತಿದ್ದಾನೆ. ಕಲರ್ಸ್ ಕನ್ನಡ ವಾಹಿನಿ ಎಸ್‌ಪಿಬಿ ಗಾನ ಸ್ಮರಣೆಗಾಗಿ ಎದೆತುಂಬಿ ಹಾಡಿದೆನು ಕಾರ್ಯಕ್ರಮವನ್ನು ಆರಂಭಿಸಿದೆ. ರಾಜ್ಯಾದಾದ್ಯಂತ ಸಾವಿರಾರು ಮಂದಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಆದ್ರೆ ಬಿಸಿಲುನಾಡಿನ ಹುಡುಗ ಸೂರ್ಯಕಾಂತ್ ಆಡಿಷನ್‌ನಲ್ಲಿ ಹಾಡಿದ ಮೂಕನಾಗಿರಬೇಕು ಜಗದೊಳು ಹಾಡು ಎಲ್ಲರನ್ನೂ ಮಂತ್ರಮುಗ್ದರನ್ನಾಗಿಸಿತ್ತು. ತೀರ್ಪುಗಾರರಾಗಿದ್ದ ಖ್ಯಾತ ಗಾಯಕ ರಾಜೇಶ್ ಕೃಷ್ಣನ್, ಹರಿಕೃಷ್ಣ ರಘು ದೀಕ್ಷಿತ್ ನೂರಕ್ಕೆ ನೂರು ಅಂತ ನೀಡಿದ್ರು.
ಬಾಲ್ಯದಿಂದಲೇ ತೊದಲುವಿಕೆಯ ಸಮಸ್ಯೆಯಿಂದ ಬಳಲುತ್ತಿದ್ದ ಸೂರ್ಯಕಾಂತ್ ಬಗ್ಗೆ ಹಲವರು ಆಡಿಕೊಂಡಿದ್ದರು. ಇನ್ನು ಸೂರ್ಯಕಾಂತ್ ತಾನು ಹಾಡುತ್ತೇನೆ ಅಂತಾ ಹೇಳಿದಾಗ ಹಲವು ನಕ್ಕಿದ್ದರು. ಆದ್ರೀಗ ಎದೆತುಂಬಿ ಹಾಡುವೆನು ಕಾರ್ಯಕ್ರಮದ ವೇದಿಕೆಯಲ್ಲಿ ನಿಂತು ಸೂರ್ಯ ಹಾಡುತ್ತಿದ್ರೆ ಎಲ್ಲರೂ ಮಂತ್ರ ಮುಗ್ದರಾಗುತ್ತಿದ್ದಾರೆ. ತಂದೆಯನ್ನು ಕಳೆದುಕೊಂಡಿದ್ದ ಸೂರ್ಯಕಾಂತ್ ಗೆ ತಾಯಿಯೇ ಎಲ್ಲಾ. ಕೂಲಿನಾಲಿ ಮಾಡಿ ಮಗನನ್ನು ಬೆಳೆಸಿದ್ದಾರೆ. ಬಡತನ ಬೇಗೆಯಲ್ಲಿ ಬೆಂದಿದ್ದ ಸೂರ್ಯನಿಗೆ ತಾಯಿಯೇ ಸರ್ವಸ್ವ. ಎದೆತುಂಬಿ ಹಾಡಿದೆನು ಕಾರ್ಯಕ್ರಮಕ್ಕೆ ಸೂರ್ಯಕಾಂತ್ ಆಯ್ಕೆಯಾಗಿರೋದನ್ನು ತಾಯಿ ಕೇಳುತ್ತಲೇ ಸಂಭ್ರಮಿಸಿದ್ದಾರೆ.
27 ವರ್ಷದ ಸೂರ್ಯಕಾಂತ್ ಗುರು ಪಂಚಾಕ್ಷರಿ ಅಣ್ಣಿಗೇರಿ ಅವರ ಬಳಿಯಲ್ಲಿ ಸಂಗೀತವನ್ನು ಅಭ್ಯಾಸ ಮಾಡುತ್ತಿದ್ದಾರೆ. ತೊದಲುತ್ತಾ ಮಾತನಾಡುವ ಸೂರ್ಯ ಶಾಸ್ತ್ರೀಯ ಸಂಗೀತವನ್ನು ಸುಶ್ರಾವ್ಯವಾಗಿ ಹಾಡುತ್ತ ಎಲ್ಲರ ಮನಗೆದ್ದಿದ್ದಾರೆ. ಆದರೆ ಕಾರ್ಯಕ್ರಮಕ್ಕೆ ಬರುವುದನ್ನ ತನ್ನ ಗುರುಗಳಿಗೆ ತಿಳಿಸಿಲ್ಲ. ಕಾರ್ಯಕ್ರಮವನ್ನುಗೆದ್ದು ಗುರುವಿನ ಪಾದಕ್ಕೆ ಸಮರ್ಪಿಸಬೇಕೆನ್ನುವ ತುಡಿತ ಸೂರ್ಯಕಾಂತನದ್ದು. ತನಗೆ ಅವಕಾಶ ಕಲ್ಪಿಸಿದ ವಾಹಿನಿಗೆ, ತೀರ್ಪುಗಾರರಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾನೆ.
ಈ ವಾರ ಸೂರ್ಯಕಾಂತ್ ತಾಯಿಯನ್ನು ಕಲ್ಲರ್ಸ್ ವೇದಿಕೆಗೆ ಕರೆತರಲಾಗಿತ್ತು. ತಾಯಿಯನ್ನು ಸೂರ್ಯಕಾಂತ್ ಕಣ್ಣೀರು ಸುರಿಸಿದ್ದಾನೆ. ತನಗೆ ತಾಯಿಯೇ ದೊಡ್ಡ ಪದಕ ಎಂದಿರುವ ಸೂರ್ಯ, ತಾಯಿ ಪಟ್ಟಿರುವ ಕಷ್ಟವನ್ನು ಕರುನಾಡಿನ ಮುಂದೆ ಬಿಚ್ಚಿಟ್ಟಿದ್ದಾನೆ. ಇದೀಗ ಸೂರ್ಯನ ಹಾಡಿಗೆ ಇಡೀ ಕರುನಾಡೇ ಮೆಚ್ಚಿಕೊಂಡಿದೆ. ಪ್ರತೀ ವೀಕೆಂಡ್ ಬಂದ್ರೆ ಸಾಕು ಸೂರ್ಯನ ಹಾಡಿಗೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ : Vikranthrona: ಸುದೀಪ್ ಹುಟ್ಟುಹಬ್ಬದಂದು ಫ್ಯಾನ್ಸ್ ಗೆ ಸ್ಪೆಶಲ್ ಧಮಾಕಾ: ವಿಕ್ರಾಂತ್ ರೋಣ ಅಡ್ಡಾದಿಂದ ಸಿಗಲಿದೆ ಭರ್ಜರಿ ಗಿಫ್ಟ್
ಇದನ್ನೂ ಓದಿ : Priyanka timmesh: ಹಾಟ್ ಆಂಡ್ ಬೋಲ್ಡ್ ಪೋಟೋಶೂಟ್ ನಲ್ಲಿ ಮಿಂಚಿದ ನಟಿ ಪ್ರಿಯಾಂಕಾ ತಿಮ್ಮೇಶ್