ಕಳೆದ ಲೋಕಸಭಾ ಚುನಾವಣೆ ವೇಳೆ ಲೋಕಸಭೆ ಪ್ರವೇಶಿಸಿದ್ದವರ ಪೈಕಿ ಅತ್ಯಂತ ಹೆಚ್ಚು ಗಮನ ಸೆಳೆದ ಇಬ್ಬರೂ ತಾರಾಮಣಿಗಳು ನವನೀತ್ ಕೌರ್ ಮತ್ತು ಟಿಎಂಸಿ ಸಂಸದೆ ನುಸ್ರತ್ ಜಹಾನ್. ಇದೀಗ ಈ ಇಬ್ಬರೂ ಸಂಸದೆಯರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ನವನೀತ್ ಕೌರ್ ಜಾತಿಪ್ರಮಾಣ ಪತ್ರ ವಿವಾದಕ್ಕೆ ಸಿಲುಕಿದ್ದರೇ, ಸಂಸದೆ ನುಸ್ರತ್ ಜಹಾನ್ ಮದುವೆ ಪ್ರಹಸನ ಬೀದಿಗೆ ಬಿದ್ದಿದೆ.

ನಟಿ ಹಾಗೂ ಸಂಸದೆ ನುಸ್ರತ್ ಜಹಾನ್ 2019 ರಲ್ಲಿ ಟಿಎಂಸಿ ಪಕ್ಷದಿಂದ ಲೋಕಸಭಾ ಚುನಾವಣೆ ಸ್ಪರ್ಧಿಸಿ ಗೆದ್ದಿದ್ದರು. ಚುನಾವಣೆ ಗೆದ್ದ ಬೆನ್ನಲ್ಲೇ ಸಂಸದೆ ನುಸ್ರತ್ ಜಹಾನ್ ಉದ್ಯಮಿ ನಿಖಿಲ್ ಜೈನ್ ರನ್ನು ಟರ್ಕಿಯಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು.

ಅಂತರ ಧರ್ಮೀಯ ಮದುವೆ ಹಲವು ವಿವಾದಕ್ಕೆ ಕಾರಣವಾಗಿತ್ತು. ಆದರೆ ಇದೀಗ ನುಸ್ರತ್ ಜಹಾನ್ ಹಾಗೂ ನಿಖಿಲ್ ಜೈನ್ ಮದುವೆ ಬೀದಿಗೆ ಬಿದ್ದಿದ್ದು, ಪತಿಯೊಂದಿಗಿನ ಪೋಟೋ ಹಾಗೂ ಮದುವೆ ಪೋಟೋಗಳನ್ನು ನುಸ್ರುತ್ ಜಹಾನ್ ಸೋಷಿಯಲ್ ಮೀಡಿಯಾದಿಂದ ಡಿಲೀಟ್ ಮಾಡಿದ್ದಾರೆ.

ಅಷ್ಟೇ ಅಲ್ಲ ನಿಖಿಲ್ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾರೆ. 2019 ರಲ್ಲಿ ನಿಖಿಲ್ ಜೊತೆ ಮದುವೆ ಆಗಿರುವುದಾಗಿ ಘೋಷಿಸಿದ್ದ ನುಸ್ರತ್ ಈ ಮದುವೆಯನ್ನು ಭಾರತದಲ್ಲಿ ನೋಂದಣಿ ಮಾಡಿಸಿರಲಿಲ್ಲ.

ಕೆಲ ತಿಂಗಳಿನಿಂದ ವೈಮನಸ್ಯದಿಂದ ದೂರವಾಗಿದ್ದ ದಂಪತಿ ಈಗ ಅಧಿಕೃತವಾಗಿ ಸಂಬಂಧ ಮುರಿದುಕೊಂಡಿದ್ದಾರೆ ಎನ್ನಲಾಗಿದೆ. ಈ ವರಸೆ ಬದಲಾಯಿಸಿರುವ ಸಂಸದೆ ನುಸ್ರತ್ ಜಹಾನ್, ಇದು ಮದುವೆಯಲ್ಲ ನಾವು ಲಿವಿಂಗ್ ಟುಗೆದರ್ ಸಂಬಂಧದಲ್ಲಿದ್ದೇವು ಎಂದಿದ್ದಾರೆ.

ತಮ್ಮದು ಕಾನೂನು ಸಮ್ಮತ ವಿವಾಹವಲ್ಲ ಎಂದಿರುವ ನುಸ್ರತ್ ವಿರುದ್ಧ ನಿಖಿಲ್ ಜೈನ್ ಕೂಡ ಹಲವಾರು ಆರೋಪ ಮಾಡಿದ್ದಾರೆ.

ಒಟ್ಟಿನಲ್ಲಿ ಸಂಸದೆಯಾಗಿರುವ ನುಸ್ರತ್ ಜಹಾನ್ ವೈಯಕ್ತಿಕ ವಿಚಾರಕ್ಕೆ ಸುದ್ದಿಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆ ಆರಂಭವಾಗಿದೆ.